

ನವದೆಹಲಿ: ಕೇರಳ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರತೀಯ ಚುನಾವಣಾ ಆಯೋಗ(ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಶ್ನಿಸಿ ಸಲ್ಲಿಸಲಾದ ಹೊಸ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಸ್‌ವಿಎನ್ ಭಟ್ಟಿ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಸುಪ್ರೀಂ ಪೀಠ, ವಿವಿಧ ರಾಜಕೀಯ ನಾಯಕರು ಹೊಸದಾಗಿ ಸಲ್ಲಿಸಲಾದ ಅರ್ಜಿಗಳ ಕುರಿತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ಈ ಅರ್ಜಿಗಳು ಹಲವು ರಾಜ್ಯಗಳಲ್ಲಿ ವಿವಿಧ ಆಧಾರದ ಮೇಲೆ ಎಸ್‌ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆ ಮತ್ತು ಸಮಯವನ್ನು ಪ್ರಶ್ನಿಸಿವೆ.
ಕೇರಳದ ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಈ ವಿಷಯಕ್ಕೆ ತುರ್ತು ಗಮನ ಹರಿಸುವ ಅಗತ್ಯವಿದೆ ಎಂದು ವಾದಿಸಿದರು.
ಎಸ್‌ಐಆರ್ ಪ್ರಕ್ರಿಯೆಯ ಸಮಯವು, ಈ ಚುನಾವಣೆಗಳ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಿಬಲ್ ವಾದಿಸಿದರು.
ಕಳವಳಗಳನ್ನು ಗಮನಿಸಿದ ಪೀಠವು ಕೇರಳಕ್ಕೆ ಸಂಬಂಧಿಸಿದ ಅರ್ಜಿಗಳನ್ನು ನವೆಂಬರ್ 26 ರಂದು ವಿಚಾರಣೆಗೆ ನಿಗದಿಪಡಿಸಿದ್ದು, ಇತರ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿಗಳನ್ನು ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ.
ದೇಶಾದ್ಯಂತ ಎಸ್‌ಐಆರ್ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಹಲವಾರು ಅರ್ಜಿಗಳು ದಾಖಲಾಗಿವೆ. ನವೆಂಬರ್ 11 ರಂದು, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಸುವ ಬಗ್ಗೆ ಪ್ರಶ್ನಿಸಿರುವ ಡಿಎಂಕೆ, ಸಿಪಿಐ(ಎಂ), ಪಶ್ಚಿಮ ಬಂಗಾಳ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕರಂತಹ ರಾಜಕೀಯ ಪಕ್ಷಗಳು ಸಲ್ಲಿಸಿದ ಅರ್ಜಿಗಳ ಕುರಿತು ನ್ಯಾಯಾಲಯವು, ಚುನಾವಣಾ ಆಯೋಗದಿಂದ ವೈಯಕ್ತಿಕ ಪ್ರತಿಕ್ರಿಯೆಗಳನ್ನು ಕೋರಿತ್ತು.
Advertisement