

ದುಬೈ ಏರ್ ಶೋ-2025ರ ಮುಕ್ತಾಯ ದಿನ ಕಾರ್ಯಕ್ರಮವಾದ ನಿನ್ನೆ ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ (37) ಅವರ ತೇಜಸ್ ಫೈಟರ್ ಜೆಟ್ ಪತನಗೊಂಡು ಹುತಾತ್ಮರಾದ ನಂತರ ಕಾಂಗ್ರಾ ಕಣಿವೆ ಜನ ತೀವ್ರ ದುಃಖಕ್ಕೀಡಾಗಿದ್ದಾರೆ.
ಸ್ಥಳೀಯ ಸಮಯ ನಿನ್ನೆ ಮಧ್ಯಾಹ್ನ ಅಭ್ಯಾಸ ಮತ್ತು ಪ್ರದರ್ಶನ ಹಾರಾಟದ ಸಮಯದಲ್ಲಿ ತೇಜಸ್ ವಿಮಾನವು ಪತನಗೊಂಡಿತು. ಜೆಟ್ ಎತ್ತರಕ್ಕೆ ಹಾರುವ ಸನ್ನಿವೇಶ ಕಳೆದುಕೊಂಡು ನೆಲಕ್ಕೆ ಅಪ್ಪಳಿಸುವ ಮೊದಲು ಬೆಂಕಿ ಹೊತ್ತಿಕೊಂಡು ಉರಿಯಿತು. ಆಕಾಶದಲ್ಲಿ ದಟ್ಟ ಹೊಗೆ ಆವರಿಸಿತು. ಪ್ರತಿಷ್ಠಿತ ಏರ್ ಶೋನಲ್ಲಿ ಅಲ್ಲಿ ಸೇರಿದ್ದವರು ದಿಗ್ಭ್ರಮೆಗೊಂಡರು.
ನಗ್ರೋಟಾ ಬಾಗ್ವಾನ್‌ನ ಪಟಿಯಾಲಕಾಡ್ ಗ್ರಾಮದ ನಿವಾಸಿ ವಿಂಗ್ ಕಮಾಂಡರ್ ಸಯಾಲ್, ತಮ್ಮ ಶಿಸ್ತು ಮತ್ತು ಭಾರತೀಯ ವಾಯುಪಡೆಯಲ್ಲಿ ಸೇವೆಗೆ ಹೆಸರುವಾಸಿಯಾಗಿದ್ದರು. 2009 ರಲ್ಲಿ ಎನ್‌ಡಿಎಗೆ ಸೇರುವ ಮೊದಲು ಅವರು ಡಾಲ್ಹೌಸಿಯ ಪ್ರಾಥಮಿಕ ಶಾಲೆ, ಆರ್ಮಿ ಪಬ್ಲಿಕ್ ಸ್ಕೂಲ್ ಯೊಲ್ ಕ್ಯಾಂಟ್ ಧರ್ಮಶಾಲಾ ಮತ್ತು ಹಿಮಾಚಲ ಪ್ರದೇಶದ ಸುಜನ್‌ಪುರ್ ತಿರಾದ ಸೈನಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ನಿವೃತ್ತ ಸೇನಾ ಅಧಿಕಾರಿ ಮತ್ತು ಮಾಜಿ ಪ್ರಾಂಶುಪಾಲ ಅವರ ತಂದೆ ಜಗನ್ ನಾಥ್ ಸಯಾಲ್, ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನಿನ್ನೆ ನನ್ನ ಮಗನ ಜೊತೆ ಕೊನೆಯ ಬಾರಿಗೆ ಮಾತನಾಡಿದ್ದೆ. ಟಿವಿ ಚಾನೆಲ್‌ಗಳು, ಯೂಟ್ಯೂಬ್‌ನಲ್ಲಿ ಏರ್ ಶೋ ಸಮಯದಲ್ಲಿ ತನ್ನ ಪ್ರದರ್ಶನವನ್ನು ನೋಡಲು ಅವನು ನನಗೆ ಹೇಳಿದನು.
ಸಂಜೆ 4 ಗಂಟೆ ಸುಮಾರಿಗೆ, ದುಬೈನಲ್ಲಿ ನಡೆಯುತ್ತಿರುವ ಏರ್ ಶೋನ ವೀಡಿಯೊಗಳನ್ನು ನಾನು ಯೂಟ್ಯೂಬ್‌ನಲ್ಲಿ ಹುಡುಕುತ್ತಿದ್ದಾಗ, ವಿಮಾನ ಅಪಘಾತದ ಬಗ್ಗೆ ವರದಿಗಳು ಬರುತ್ತಿದ್ದವು. ತಕ್ಷಣವೇ, ಏನಾಯಿತು ಎಂದು ಪರಿಶೀಲಿಸಲು ನಾನು ನನ್ನ ಸೊಸೆಗೆ ಕರೆ ಮಾಡಿದೆ, ಅವರು ವಿಂಗ್ ಕಮಾಂಡರ್ ಕೂಡ ಆಗಿದ್ದಾರೆ. ಕ್ಷಣಗಳ ನಂತರ, ಕನಿಷ್ಠ ಆರು ವಾಯುಪಡೆಯ ಅಧಿಕಾರಿಗಳು ನಮ್ಮ ಮನೆಗೆ ಬಂದರು, ಏನೋ ಕೆಟ್ಟ ಘಟನೆ ನಡೆದಿದೆ ಎಂದು ನನಗೆ ಆಗ ಅರಿವಾಯಿತು.
ನಮಾಂಶ್ ಸಯಾಲ್ ತಂದೆ- ತಾಯಿ ವೀಣಾ ಸಯಾಲ್ ಸೇರಿದಂತೆ ಸಯಾಲ್ ಕುಟುಂಬವು ಪ್ರಸ್ತುತ ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿದ್ದಾರೆ. ನಮಾಂಶ್ ಅವರ ಪತ್ನಿ ಕೂಡ IAF ಅಧಿಕಾರಿ ಆಗಿದ್ದಾರೆ. ಕೋಲ್ಕತ್ತಾದಲ್ಲಿ ತರಬೇತಿ ಪಡೆಯುತ್ತಿದ್ದರು. ಜಗನ್ ನಾಥ್ ಸಯಾಲ್ ತಮ್ಮ ಮಗನನ್ನು ಓದಿನಲ್ಲಿ ಅತ್ಯುತ್ತಮ ಮತ್ತು ತನ್ನ ಜೀವನದ ಬಗ್ಗೆ ದೊಡ್ಡ ಕನಸು ಕಂಡ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ. ಈ ಘಟನೆ ನಮ್ಮನ್ನು ಸಂಪೂರ್ಣವಾಗಿ ನುಚ್ಚುನೂರು ಮಾಡಿದೆ ಎಂದು ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜಿ-ಫೋರ್ಸ್‌ನಿಂದಾಗಿ ಪೈಲಟ್ ನಿಯಂತ್ರಣ ಕಳೆದುಕೊಂಡು ಬ್ಲ್ಯಾಕೌಟ್ ಆಗಿರುವ ಸಾಧ್ಯತೆ !
ದುಬೈ ಏರ್ ಶೋ 2025 ರ ಸಮಯದಲ್ಲಿ ತೇಜಸ್ ವಿಮಾನ ಅಪಘಾತದ ಸ್ವರೂಪವನ್ನು ನೋಡಿದರೆ, ಪೈಲಟ್ ನಿಯಂತ್ರಣ ಕಳೆದುಕೊಂಡ ಕಾರಣ ಅಥವಾ ಗುರುತ್ವಾಕರ್ಷಣೆಯಿಂದ ಉಂಟಾದ ಬ್ಲ್ಯಾಕೌಟ್‌ನಿಂದ ಈ ಘಟನೆ ಸಂಭವಿಸಿರಬಹುದು ಎಂದು ರಕ್ಷಣಾ ತಜ್ಞ ಕ್ಯಾಪ್ಟನ್ ಅನಿಲ್ ಗೌರ್ (ನಿವೃತ್ತ) ಊಹಿಸಿದ್ದಾರೆ.
ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕ್ಯಾಪ್ಟನ್ ಗೌರ್, ಕಾಕ್‌ಪಿಟ್‌ನಿಂದ ಡೇಟಾವನ್ನು ಪಡೆದ ನಂತರವೇ ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಬಹುದು ಎಂದು ಹೇಳಿದರು.
ಅಪಘಾತದಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ ಕ್ಯಾಪ್ಟನ್ ಗೌರ್, ದುಬೈ ಏರ್ ಶೋ ಸಮಯದಲ್ಲಿ ನಮ್ಮ ತೇಜಸ್ ಜೆಟ್ ಅಪಘಾತಕ್ಕೀಡಾಗಿದ್ದು ಮತ್ತು ನಮ್ಮ ಧೈರ್ಯಶಾಲಿ ಪೈಲಟ್ ಪ್ರಾಣ ಕಳೆದುಕೊಂಡಿರುವುದು ದುಃಖಕರವಾಗಿದೆ. ಚಮತ್ಕಾರಿಕ ಸಮಯದಲ್ಲಿ ಜೆಟ್ ನಿಯಂತ್ರಣ ಕಳೆದುಕೊಂಡಂತೆ ತೋರುತ್ತದೆ, ಅಥವಾ ಪೈಲಟ್ ಬ್ಲ್ಯಾಕೌಟ್ ಆಗಿರಬಹುದು. ಇಲ್ಲಿ ಬ್ಲ್ಯಾಕೌಟ್ ಎಂದರೆ ಅತಿಯಾದ ಗುರುತ್ವಾಕರ್ಷಣ ಬಲ ಎಂದರು.
ಪೈಲಟ್‌ಗಳು ತಮ್ಮ ಕಾಲುಗಳಲ್ಲಿ ರಕ್ತ ಸಂಗ್ರಹವಾಗದಂತೆ ಜಿ-ಸೂಟ್ ಧರಿಸುತ್ತಾರೆ. ಅದರಲ್ಲಿ ಏನಾದರೂ ಸಮಸ್ಯೆ ಇದ್ದಿರಬಹುದು. ಕಾಕ್‌ಪಿಟ್ ಡೇಟಾವನ್ನು ಮರಳಿ ಪಡೆದ ನಂತರವೇ ನಿಖರವಾಗಿ ಏನಾಯಿತು ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದರು.
ಅತಿಯಾದ ಜಿ-ಫೋರ್ಸ್‌ಗಳು ದೇಹದ ಕೆಳಭಾಗದಲ್ಲಿ ರಕ್ತ ಸಂಗ್ರಹವಾಗಲು ಕಾರಣವಾಗಬಹುದು, ಇದು ಪೈಲಟ್‌ಗೆ ಬ್ಲ್ಯಾಕೌಟ್‌ಗೆ ಕಾರಣವಾಗಬಹುದು.
ಫೈಟರ್ ಜೆಟ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿತು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
Advertisement