

ರಾಂಚಿ: ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಗಾಗಿ ನಿಮ್ಮ ಮನೆಗಳಿಗೆ ಭೇಟಿ ನೀಡಿದರೆ ಅವರನ್ನು ಒಳಗೆ ಕೂಡಿಹಾಕಿ ಬೀಗ ಹಾಕುವಂತೆ ಜಾರ್ಖಂಡ್ ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಅವರ ಭಾನುವಾರ ಜನರಿಗೆ ವಿವಾದಾತ್ಮಕ ಸಲಹೆ ನೀಡಿದ್ದಾರೆ.
ಜಾಮ್ತಾರಾದಲ್ಲಿ ನಡೆದ "ಸೇವಾ ಕೆ ಅಧಿಕಾರ್ ಸಪ್ತಾಹ್" ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಇರ್ಫಾನ್ ಅನ್ಸಾರಿ, ಬಿಜೆಪಿಯು, ಜನರನ್ನು "ಒಳನುಸುಳುಕೋರರು" ಎಂದು ಬ್ರಾಂಡ್ ಮಾಡಲು ಮತ್ತು ಎಸ್‌ಐಆರ್ ಸೋಗಿನಲ್ಲಿ ನಿಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.
"ಯಾರಾದರೂ(ಬಿಎಲ್‌ಒ) ಮತದಾರರ ಪಟ್ಟಿಯಿಂದ ನಿಮ್ಮ ಹೆಸರನ್ನು(ಎಸ್‌ಐಆರ್) ತೆಗೆದುಹಾಕಲು ಬಂದರೆ, ಅವರನ್ನು ನಿಮ್ಮ ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿ.....ನಾನು ಬಂದು ಬೀಗ ತೆರೆಯುತ್ತೇನೆ. ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಲು ಅವರಿಗೆ ಅವಕಾಶ ನೀಡಬೇಡಿ" ಎಂದು ಇರ್ಫಾನ್ ಅನ್ಸಾರಿ ಹೇಳಿದ್ದಾರೆ.
ಅನ್ಸಾರಿ ಪ್ರಕಾರ, ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕಲು ಎಸ್‌ಐಆರ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅದೇ ಪ್ರಕ್ರಿಯೆಯಡಿಯಲ್ಲಿ ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರ ಪರಿಣಾಮವಾಗಿ ಮಹಾಘಟಬಂಧನ್‌ಗೆ ಸುಮಾರು 80 ವಿಧಾನಸಭಾ ಕ್ಷೇತ್ರಗಳಲ್ಲಿ ನಷ್ಟವಾಗಿದೆ.
ಚುನಾವಣಾ ಆಯೋಗದ ಈ ಕ್ರಮವು ಸಾವಿರಾರು ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಅಲ್ಲದೆ ಅವರ ಪೌರತ್ವದ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅನ್ಸಾರಿ ಹೇಳಿದರು.
ಬಿಜೆಪಿ ಈಗ ಪಶ್ಚಿಮ ಬಂಗಾಳ ಮತ್ತು ನಂತರ ಜಾರ್ಖಂಡ್‌ನಲ್ಲಿ ಇದೇ ರೀತಿಯ ತಂತ್ರಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಅವರು ಆರೋಪಿಸಿದರು.
Advertisement