

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಕಾಬೂಲ್‌ನಿಂದ ಬಂದ ಅರಿಯಾನಾ ಅಫ್ಘಾನ್ ಏರ್‌ಲೈನ್ಸ್ ವಿಮಾನವು ಮತ್ತೊಂದು ವಿಮಾನ ಟೇಕಾಫ್ ಆಗುತ್ತಿದ್ದ ರನ್‌ವೇಯಲ್ಲಿಯೇ ತಪ್ಪಾಗಿ ಲ್ಯಾಂಡ್ ಆಗಿದ್ದು, ಅದೃಷ್ಟವಶಾತ್ ದೊಡ್ಡ ಡಿಕ್ಕಿಯೊಂದನ್ನು ತಪ್ಪಿಸಲಾಗಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಡಿಜಿಸಿಎ ಈಗಾಗಲೇ ತನಿಖೆ ಆರಂಭಿಸಿದೆ. ಅರಿಯಾನಾ ಅಫ್ಘಾನ್ ಏರ್‌ಲೈನ್ಸ್ A310 ವಿಮಾನ FG-311 (ಕಾಬೂಲ್-ದೆಹಲಿ)ಕ್ಕೆ ರನ್‌ವೇ 29Lನಲ್ಲಿ ಇಳಿಯಲು ಅನುಮತಿ ನೀಡಲಾಗಿತ್ತು. ಆದರೆ ಈ ವಿಮಾನವು ರನ್‌ವೇ 29R ನಲ್ಲಿ ಲ್ಯಾಂಡ್ ಆಯಿತು ಎಂದು ಅವರು ಹೇಳಿದ್ದಾರೆ.
ಅರಿಯಾನಾ ವಿಮಾನದ ಪೈಲಟ್-ಇನ್-ಕಮಾಂಡ್(PIC) 4NM(ನಾಟಿಕಲ್ ಮೈಲಿಗಳು) ನಲ್ಲಿ ILS(ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್) ಅನ್ನು ಕಳೆದುಕೊಂಡಿತು ಮತ್ತು ವಿಮಾನವು ಬಲಕ್ಕೆ ತಿರುಗಿತು. ನಂತರ ಕ್ಯಾಪ್ಟನ್ ರನ್‌ವೇ 29R ನಲ್ಲಿ ಇಳಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ILS ಒಂದು ನಿಖರವಾದ ರೇಡಿಯೋ ನ್ಯಾವಿಗೇಷನ್ ವ್ಯವಸ್ಥೆಯಾಗಿದ್ದು, ಇದು ವಿಮಾನಕ್ಕೆ ಅಲ್ಪ-ಶ್ರೇಣಿಯ ಮಾರ್ಗದರ್ಶನವನ್ನು ಒದಗಿಸುತ್ತದೆ. ಇದು ಕೆಟ್ಟ ಹವಾಮಾನ ಮತ್ತು ಕಳಪೆ ಗೋಚರತೆಯ ಸಮಯದಲ್ಲಿ ರಾತ್ರಿಯಲ್ಲಿ ರನ್‌ವೇಯನ್ನು ಸಮೀಪಿಸಲು ಅನುವು ಮಾಡಿಕೊಡುತ್ತದೆ.
ಜೆಟ್ ವಿಮಾನವು ರನ್‌ವೇಯಲ್ಲಿ ತಪ್ಪಾಗಿ ಇಳಿದಿದೆಯೇ? ಅಥವಾ ವಾಯು ಸಂಚಾರ ನಿಯಂತ್ರಕರ ಸೂಚನೆಗಳ ಮೇರೆಗೆ ಲ್ಯಾಂಡ್ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
"ಕಳಪೆ ಗೋಚರತೆ ಮತ್ತು ILS ಮಾರ್ಗದರ್ಶನದ ವೈಫಲ್ಯದಿಂದಾಗಿ, ವಿಮಾನವು ಉದ್ದೇಶಿತ ಮಾರ್ಗದಿಂದ ಬೇರೆ ಮಾರ್ಗದಲ್ಲಿ ಲ್ಯಾಂಡ್ ಆಗಿದೆ. ಅದೃಷ್ಟವಶಾತ್, ಆ ಸಮಯದಲ್ಲಿ ಯಾವುದೇ ವಿಮಾನ ಹಾರಲು ಸಿದ್ಧವಾಗಿರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ" ಎಂದು ಅವರು ಹೇಳಿದ್ದಾರೆ.
Advertisement