

ಶ್ರೀನಗರ: ವಿದ್ಯುತ್ ದರದ ಮೇಲೆ ಶೇ.20 ರಷ್ಟು ಸರ್‌ಚಾರ್ಜ್ ವಿಧಿಸುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪ್ರಸ್ತಾವಿತ ಯೋಜನೆ ಕುರಿತ ವರದಿಗಳ ಬಗ್ಗೆ ವ್ಯಾಪಕ ಸಾರ್ವಜನಿಕ ಆಕ್ರೋಶದ ನಂತರ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋಮವಾರ ಯಾವುದೇ ವಿದ್ಯುತ್ ದರ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ವಿದ್ಯುತ್ ಹೆಚ್ಚಳದ ಪ್ರಸ್ತಾಪವಿಲ್ಲ ಮತ್ತು ಈ ವದಂತಿ ಎಲ್ಲಿಂದ ಪ್ರಾರಂಭವಾಯಿತು ಎಂದು ನನಗೆ ಗೊತ್ತಿಲ್ಲ" ಎಂದು ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.
"ನಾನು ವಿದ್ಯುತ್ ಸಚಿವನೂ ಆಗಿದ್ದೇನೆ ಮತ್ತು ಇಲ್ಲಿಯವರೆಗೆ ಅಂತಹ ಯಾವುದೇ ಚರ್ಚೆ(ವಿದ್ಯುತ್ ದರವನ್ನು ಹೆಚ್ಚಿಸುವ) ನಡೆದಿಲ್ಲ. ಸರ್ಕಾರದ ಮುಂದೆ ವಿದ್ಯುತ್ ದರ ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ" ಎಂದು ಅಬ್ದುಲ್ಲಾ ಒತ್ತಿ ಹೇಳಿದರು.
ಕಣಿವೆಯಲ್ಲಿ ವಿದ್ಯುತ್ ವಿತರಣೆಯನ್ನು ನಿರ್ವಹಿಸುವ ಕಾಶ್ಮೀರ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್(ಕೆಪಿಡಿಸಿಎಲ್), ಪೀಕ್ ಸಮಯದಲ್ಲಿ(ಬೆಳಗ್ಗೆ 6 ರಿಂದ 10 ರವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 10 ರವರೆಗೆ) ಎಲ್ಲಾ ವರ್ಗದ ಗ್ರಾಹಕರ ಮೇಲೆ ಸರ್‌ಚಾರ್ಜ್ ವಿಧಿಸಲು ಜಂಟಿ ವಿದ್ಯುತ್ ನಿಯಂತ್ರಣ ಆಯೋಗದಿಂದ(ಜೆಇಆರ್‌ಸಿ) ಅನುಮೋದನೆ ಕೋರಿದ ನಂತರ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು.
ವಿದ್ಯುತ್ ಶುಲ್ಕದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಬಜೆಟ್‌ನಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ ಮುಖ್ಯಮಂತ್ರಿ, "ಇದು ಕೇವಲ ವದಂತಿ. ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಲಾಗಿದೆ" ಎಂದರು.
Advertisement