

ನವದೆಹಲಿ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಮತ್ತೆ ಬಿರುಕು ಉಂಟಾಗಿದ್ದು, ಶಿಂಧೆ ಬಣದ ಶಿವಸೇನೆ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಸಚಿವೆಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ ಸಂಸದೆ ರಕ್ಷಾ ಖಾಡ್ಸೆ ಮಂಗಳವಾರ ಜಲಗಾಂವ್ ಜಿಲ್ಲೆಯ ಮುಕ್ತೈನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಾರ್ಯಕರ್ತರು ಜನರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಇದು ಮಹಾಯುತಿಯಲ್ಲಿ ಎರಡು ಮಿತ್ರಪಕ್ಷಗಳ ನಡುವಿನ ಉದ್ವಿಗ್ನತೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
"ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಾರ್ಯಕರ್ತರನ್ನು ನೋಡಿ. ಅವರು ಜನರ ಮೇಲೆ ಒತ್ತಡ ಹೆಚ್ಚಿಸುತ್ತಿದ್ದಾರೆ. ಅದರ ವಿರುದ್ಧ ಧ್ವನಿ ಎತ್ತುವುದು ನನ್ನ ಜವಾಬ್ದಾರಿ" ಎಂದು ಖಡ್ಸೆ ವರದಿಗಾರರಿಗೆ ಹೇಳಿಕೆ ನೀಡಿದ್ದಾರೆ.
"ಶೂನ್ಯ ವ್ಯವಹಾರ"ದಲ್ಲಿ ತೊಡಗಿರುವ ಜನರನ್ನು ಶಿಂಧೆ ಬಣವು ಉತ್ತೇಜಿಸುತ್ತಿದೆ ಎಂದು ರಾವರ್ ಸಂಸದರು ಆರೋಪಿಸಿದ್ದಾರೆ. "ಅವರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ, ಜನರ ಮೇಲೆ ಒತ್ತಡ ಹೆಚ್ಚಿಸುತ್ತಿದ್ದಾರೆ. ನನ್ನ ಮಗಳು ಸಹ ಅವರ ಗೂಂಡಾ ವರ್ತನೆಯಿಂದ ಬಳಲುತ್ತಿದ್ದಾಳೆ" ಎಂದು ಕ್ರೀಡಾ ಮತ್ತು ಯುವ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಹೇಳಿದ್ದಾರೆ.
ಮುಕ್ತೈನಗರ ವಿಧಾನಸಭಾ ಕ್ಷೇತ್ರವು ಸಾಂಪ್ರದಾಯಿಕವಾಗಿ ಬಿಜೆಪಿಯ ಭದ್ರಕೋಟೆಯಾಗಿತ್ತು, ಆದರೆ ಈಗ ಅದು ಶಿಂಧೆ ಶಿಬಿರಕ್ಕೆ ಹೋಗಿದೆ ಎಂದು ಅವರು ಹೇಳಿದರು.
ತನ್ನ ಮಾವ ಏಕನಾಥ್ ಖಾಡ್ಸೆ ಅವರು ಬಿಜೆಪಿ ಸದಸ್ಯರಾಗಿದ್ದಾಗ ಹಲವಾರು ಬಾರಿ ಈ ಸ್ಥಾನವನ್ನು ಗೆದ್ದಿದ್ದರು ಎಂದು ಖಾಡ್ಸೆ ನೆನಪಿಸಿಕೊಂಡರು. 2024 ರ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ಚಂದ್ರಕಾಂತ್ ಪಾಟೀಲ್ ಮುಕ್ತೈನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
Advertisement