

ಚೆನ್ನೈ: ಒಂಬತ್ತು ಬಾರಿ ಶಾಸಕರಾಗಿರುವ ಉಚ್ಚಾಟಿತ ಎಐಎಡಿಎಂಕೆ ಶಾಸಕ ಕೆಎ ಸೆಂಗೋಟ್ಟೈಯನ್ ಅವರು ಬುಧವಾರ ತಮಿಳುನಾಡು ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ತೀವ್ರ ಊಹಾಪೋಹಗಳಿಗೆ ಕಾರಣವಾಗಿದೆ.
ಸೆಂಗೋಟ್ಟೈಯನ್ ಅವರು ಇಂದು ರಾಜ್ಯ ಸಚಿವಾಲಯದಲ್ಲಿ ವಿಧಾನಸಭಾ ಸ್ಪೀಕರ್ ಎಂ ಅಪ್ಪಾವು ಅವರನ್ನು ಭೇಟಿ ಮಾಡಿ ಕೈಬರಹದ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಅದನ್ನು ಸ್ಪೀಕರ್ ಶೀಘ್ರದಲ್ಲೇ ಅಂಗೀಕರಿಸುವ ನಿರೀಕ್ಷೆಯಿದೆ.
72 ವರ್ಷದ ನಾಯಕ ಸೆಂಗೊಟ್ಟೈಯನ್ ಅವರು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಸೇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಮಧ್ಯೆ ಆಡಳಿತಾರೂಢ ಡಿಎಂಕೆ ಕೂಡ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದೆ. ಸೆಂಗೊಟ್ಟೈಯನ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಡಿಎಂಕೆ ಸಚಿವ ಪಿಕೆ ಶೇಖರಬಾಬು ಅವರೊಂದಿಗೆ ಚರ್ಚೆ ನಡೆಸಿದ್ದು, ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಸ್ಪೀಕರ್ ಗೆ ರಾಜೀನಾಮೆ ಪತ್ರ ಸಲ್ಲಿಸುವ ಮುನ್ನ ನೀವು ಟಿವಿಕೆ ಸೇರುತ್ತೀರಾ ಎಂದು ವರದಿಗಾರರು ಕೇಳಿದಾಗ, ಮಾಜಿ ಸಚಿವರು ಊಹಾಪೋಹಗಳಿಗೆ ಉತ್ತರಿಸಲು ನಿರಾಕರಿಸಿದರು ಮತ್ತು "ದಯವಿಟ್ಟು ಒಂದು ದಿನ ಕಾಯಿರಿ" ಎಂದು ಮಾತ್ರ ಹೇಳಿದರು.
ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ನಂತರ ಇತ್ತೀಚೆಗೆ ಡಿಎಂಕೆಗೆ ಸೇರಿದ ಮಾಜಿ ಶಾಸಕ ಅನ್ವರ್ ರಾಜ ಅವರು ಟಿಎನ್‌ಐಇ ಜೊತೆ ಮಾತನಾಡುತ್ತಾ, "ಸೆಂಗೋಟ್ಟೈಯನ್‌ಗೆ ಈಗ ಸರಿಯಾದ ಸ್ಥಳ ಡಿಎಂಕೆ, ಏಕೆಂದರೆ ಡಿಎಂಕೆ ಮತ್ತು ಎಐಎಡಿಎಂಕೆ ಸಾಮಾನ್ಯ ಸಿದ್ಧಾಂತಗಳನ್ನು ಹೊಂದಿವೆ" ಎಂದರು.
ಸೆಂಗೋಟ್ಟಯ್ಯನ್ ಸೆಪ್ಟೆಂಬರ್ 5 ರಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿದ್ದರು. ಮಾಜಿ ಮುಖ್ಯಮಂತ್ರಿ ಓ ಪನ್ನೀರ್ಸೆಲ್ವಂ, ಟಿಟಿವಿ ದಿನಕರನ್ ಮತ್ತು ವಿಕೆ ಶಶಿಕಲಾ ಸೇರಿದಂತೆ ಉಚ್ಚಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಮುಂದಿನ ಚುನಾವಣೆಯಲ್ಲಿ ಪಕ್ಷ ಸೋಲುವುದನ್ನು ತಡೆಯಲು ಎಐಎಡಿಎಂಕೆ ಪಕ್ಷಕ್ಕೆ ಎಲ್ಲಾ ಉಚ್ಚಾಟಿತ ನಾಯಕರನ್ನು ಮರಳಿ ಕರೆತರುವುದು ಅತ್ಯಗತ್ಯ ಎಂದು ಅವರು ಹೇಳಿದ್ದರು. ಆದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಎಐಎಡಿಎಂಕೆ, ಅವರನ್ನು ತಕ್ಷಣವೇ ಪಕ್ಷದ ಹುದ್ದೆಗಳಿಂದ ತೆಗೆದುಹಾಕಲಾಯಿತು.
ಅಕ್ಟೋಬರ್ 30 ರಂದು ನಡೆದ ತೇವರ್ ಜಯಂತಿಯಲ್ಲಿ ಅವರು ಭಾಗವಹಿಸಿದ್ದರು. ಅಲ್ಲಿ ಅವರು ಪನ್ನೀರ್‌ಸೆಲ್ವಂ ಮತ್ತು ದಿನಕರನ್ ಅವರೊಂದಿಗೆ ಬಹಿರಂಗವಾಗಿ ಕೈಜೋಡಿಸಿದರು. ಹೀಗಾಗಿ ಮರುದಿನವೇ ಅವರನ್ನು ಎಐಎಡಿಎಂಕೆಯಿಂದ ಉಚ್ಚಾಟಿಸಲಾಯಿತು.
Advertisement