

ಚಂಡೀಗಢ: ಪಂಜಾಬ್‌ನ ಫಾಗ್ವಾರಾ-ಜಂಡಿಯಾಲಾ ರಸ್ತೆಯ ದರ್ವೇಶ್ ಪಿಂಡ್ ಗ್ರಾಮದ ಬಳಿ ಆಡಳಿತಾರೂಢ ಎಎಪಿ ನಾಯಕನ ಮನೆಯ ಮೇಲೆ ಗುರುವಾರ ಬೆಳಗ್ಗೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬರೋಬ್ಬರಿ 23 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಆಡಳಿತಾರೂಢ ಎಎಪಿಯ 'ಯುದ್ಧ ನಾಶಿಯಾನ್ ವಿರುಧ್' ಅಭಿಯಾನ(ಮಾದಕವಸ್ತುಗಳ ವಿರುದ್ಧದ ಅಭಿಯಾನ)ದ ಫಾಗ್ವಾರಾ ಸಂಯೋಜಕ ದಲ್ಜಿತ್ ಸಿಂಗ್ ರಾಜು ಅವರ ಮನೆಯ ಮೇಲೆ ಇಂದು ಬೆಳಗಿನ ಜಾವ 1.13 ರ ಸುಮಾರಿಗೆ 23 ಸುತ್ತು ಗುಂಡು ಹಾರಿಸಲಾಗಿದ್ದು, ಕಿಟಕಿ ಮತ್ತು ಬಾಗಿಲಿನ ಗಾಜುಗಳು ಪುಡಿಪುಡಿಯಾಗಿವೆ.
ರಾಜು ಅವರನ್ನು ಹೋಶಿಯಾರ್‌ಪುರ ಸಂಸದ ರಾಜ್ ಕುಮಾರ್ ಚಬ್ಬೇವಾಲ್ ಅವರ ಆಪ್ತ ಎಂದು ಪರಿಗಣಿಸಲಾಗಿದೆ. ಅವರ ಮನೆಯ ಮೇಲೆ ಸುಮಾರು 23 ಸುತ್ತು ಗುಂಡು ಹಾರಿಸಲಾಗಿದೆ ಎಂದು ಫಾಗ್ವಾರಾ ಉಪ ವಿಭಾಗೀಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಮಾಧ್ವಿ ಶರ್ಮಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಸ್ಥಳದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಗುಂಡಿನ ದಾಳಿಯ ಕುರಿತು ಎಲ್ಲಾ ಕೋನಗಳಿಂದಲೂ ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.
"ನಾವು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸುತ್ತೇವೆ" ಎಂದು ಶರ್ಮಾ ಅವರು ಹೇಳಿದ್ದಾರೆ.
ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಮೋಟಾರ್ ಸೈಕಲ್‌ನಲ್ಲಿ ಬಂದು ತಮ್ಮ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಾಜು ಅವರು ತಿಳಿಸಿದ್ದಾರೆ.
ಬೈಕನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ತಮ್ಮ ಮನೆಯವರೆಗೆ ನಡೆದುಕೊಂಡು ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು. "ಮೊದಲು ನಾನು ಪಟಾಕಿ ಇರಬಹುದು ಎಂದು ಭಾವಿಸಿದೆ. ಆದರೆ ನಂತರ ನನ್ನ ಹೆಂಡತಿ, ಇಬ್ಬರು ಪುರುಷರು ಮನೆಯ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದನ್ನು ನೋಡಿದರು". ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆ ಎಂದು ರಾಜು ಹೇಳಿದ್ದಾರೆ.
ಸ್ಥಳದಲ್ಲಿ ಕೈಬರಹದ ಪತ್ರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದ್ದು, ಇಂಗ್ಲಿಷ್‌ನಲ್ಲಿ ಬರೆಯಲಾದ ಅದರಲ್ಲಿ ಒಂದು ನಿರ್ದಿಷ್ಟ ಗುಂಪಿನ ಹೆಸರು ಮತ್ತು 5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement