

ನವದೆಹಲಿ: ಹರಿಯಾಣದ ಮಹಾರಾಶಿ ದಯಾನಂದ ವಿಶ್ವವಿದ್ಯಾಲಯದ ಮಹಿಳಾ ನೈರ್ಮಲ್ಯ ಕಾರ್ಮಿಕರು ಮುಟ್ಟಾಗಿರುವುದಕ್ಕೆ ಅವರ ಖಾಸಗಿ ಅಂಗದ ಫೋಟೋ ಮೂಲಕ ಸಾಬೀತುಪಡಿಸುವಂತೆ ಸೂಚಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. "ಇದು ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದಲ್ಲಿ ಮುಟ್ಟಿನ ರಜೆ ನೀಡಲಾಗಿದೆ. ಆದರೆ ಇದನ್ನು ಓದಿದ ನಂತರ, ರಜೆ ನೀಡಲು ಪುರಾವೆ ಕೇಳುತ್ತಾರೆಯೇ? ಎಂದು ನಾನು ಯೋಚಿಸಿದೆ" ಎಂದು ನ್ಯಾಯಮೂರ್ತಿ ನಾಗರತ್ನ ಅಸಮಾಧಾನ ವ್ಯಕ್ತಪಡಿಸಿದರು.
"ಇದು ವ್ಯಕ್ತಿಗಳ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ಅನುಪಸ್ಥಿತಿಯಿಂದಾಗಿ ಕೆಲವು ಭಾರವಾದ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ ಬೇರೆಯವರನ್ನು ನಿಯೋಜಿಸಬಹುದಿತ್ತು. ಈ ಅರ್ಜಿಯಿಂದ ಏನಾದರೂ ಒಳ್ಳೆಯದು ಆಗತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ನ್ಯಾಯಾಧೀಶರು ಹೇಳಿದರು.
ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್(SCBA) ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್ ಇದು ಒಂದು ಗಂಭೀರ ಕ್ರಿಮಿನಲ್ ಪ್ರಕರಣವಾಗಿದೆ ಮತ್ತು ಇದು ಗಮನ ಹರಿಸಬೇಕಾದ ವಿಷಯವಾಗಿದೆ ಎಂದು ಹೇಳಿದರು.
ಆಪಾದಿತ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲು ಕೇಂದ್ರ ಮತ್ತು ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಹರಿಯಾಣ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿದೆ.
ಮಹಿಳೆಯರು ಮತ್ತು ಹುಡುಗಿಯರು ಮುಟ್ಟಿನ ಸಮಯದಲ್ಲಿ ಅವರ ಆರೋಗ್ಯ, ಘನತೆ, ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಅರ್ಜಿ ಕೋರಿದೆ.
Advertisement