

ಚಂದ್ರಾಪುರ: ರಸ್ತೆ ಮಧ್ಯೆ ಕುಳಿತ ಹುಲಿ ಮರಿಯೊಂದು ಘರ್ಜಿಸುತ್ತಾ ಗಂಟೆ ಗಂಟೆಲೇ ಸಂಚಾರವನ್ನು ಸ್ಥಗಿತಗೊಳಿಸಿದ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ತಡೋಬಾ ಬಳಿಯ ಚಂದ್ರಾಪುರ-ಮೊಹರ್ಲಿ ರಸ್ತೆಯಲ್ಲಿ ಪ್ರವಾಸಿಗರ ಉಸಿರು ಬಿಗಿಹಿಡಿದ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ದಟ್ಟ ಅರಣ್ಯ ಪ್ರದೇಶದಲ್ಲಿ ಹುಲಿಗಳು ಈ ರೀತಿ ರಸ್ತೆಗೆ ದಾಂಗುಡಿ ಇಡುವುದು ಸಾಮಾನ್ಯ. ತಡೋಬಾ ಹುಲಿ ಅಭಯಾರಣ್ಯದ ಬಫರ್ ವಲಯದಲ್ಲಿ ಈ ಘಟನೆ ಸಂಭವಿಸಿದೆ. ಈ ವೀಡಿಯೊವನ್ನು ಸ್ಥಳೀಯ ನಿವಾಸಿ ಆಕಾಶ್ ಆಲಂ ಎಂಬುವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಹುಲಿ ಅಲ್ಲಿಂದ ಹೋಗಬಹುದು ಎಂದು ವಾಹನ ಸವಾರರು ರಸ್ತೆಯಲ್ಲಿ ಗಂಟೆ ಗಟ್ಟಲೇ ಕಾಯುವುದು ಕಂಡುಬಂದಿದೆ.
ಮುಂಜಾನೆ ಮತ್ತು ಸಂಜೆ ಈ ರಸ್ತೆಯಲ್ಲಿ ವನ್ಯಜೀವಿಗಳು ಕಾಣಿಸಿಕೊಳ್ಳುವುದು ಬಹುತೇಕ ಸಾಮಾನ್ಯವಾಗಿದೆ. ಇಲ್ಲಿ ವನ್ಯಜೀವಿಗಳು ಹಾಗೂ ಮಾನವರ ನಡುವಣ ಸಂಘರ್ಷ ಆಗ್ಗಾಗೆ ನಡೆಯುತ್ತಲೇ ಇರುತ್ತದೆ. ಅರಣ್ಯ ಅಧಿಕಾರಿಗಳು ಆಗಾಗ್ಗೆ ಪ್ರಯಾಣಿಕರು ಜಾಗರೂಕರಾಗಿರಿ, ಹಾರ್ನ್ ಮಾಡುವುದನ್ನು ತಪ್ಪಿಸಿ ಮತ್ತು ಪ್ರಾಣಿಗಳು ಇರುವಾಗ ತಮ್ಮ ವಾಹನಗಳಿಂದ ಹೊರಬರಬಾರದು ಎಂದು ಸಲಹೆ ನೀಡುತ್ತಿರುತ್ತಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
ಈ ಪ್ರದೇಶದಲ್ಲಿ ಹುಲಿಗಳು ಆಗಾಗ್ಗೆ ಕಾಣಿಸಿಕೊಳ್ಳುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ವನ್ಯಜೀವಿಗಳು ರಸ್ತೆ ದಾಟುವಾಗ ಗಂಭೀರ ಅಪಾಯಗಳನ್ನುಂಟುಮಾಡುತ್ತವೆ. ಜನರು ಸುರಕ್ಷಿತ ಸಮಯಗಳಲ್ಲಿ ತೆರಳಲು ಮತ್ತು ಈ ರಸ್ತೆ ಬಳಸುವಾಗ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಲೇ ಇರುತ್ತಾರೆ.
Advertisement