
ಲಖನೌ: ಆಗ್ರಾದಲ್ಲಿ ವಿಜಯ ದಶಮಿಯಂದು ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ 17ಕ್ಕೂ ಹೆಚ್ಚು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ತಂಡಗಳು ನದಿಯಿಂದ ಮೂರು ಶವಗಳನ್ನು ಹೊರತೆಗೆದರೆ, ಒಬ್ಬ ಯುವಕನನ್ನು ರಕ್ಷಿಸಿದ್ದಾರೆ. ಇನ್ನೂ ಹದಿಮೂರು ಜನರು ಕಾಣೆಯಾಗಿದ್ದು, SDRF ಮತ್ತು NDRF ತಂಡಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ.
ಮೊದಲ ಘಟನೆ ಆಗ್ರಾ ಜಿಲ್ಲೆಯ ಖೇರಾಗಢದಲ್ಲಿ ನಡೆದಿದ್ದು, ಅಲ್ಲಿ ಕುಸಿಯಾಪುರ್ ಗ್ರಾಮದ 14 ಯುವಕರು ಉತಂಗನ್ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ರಕ್ಷಣಾ ತಂಡ ಮೂರು ಶವಗಳನ್ನು ಹೊರತೆಗೆದಿದ್ದು, ಒಬ್ಬ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನೂ 10 ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
20 ವರ್ಷದ ಹರೇಶ್ ಮತ್ತು 17 ವರ್ಷದ ಗಗನ್ ಎಂಬ ಇಬ್ಬರು ಸಹೋದರರು ಪ್ರಾಣ ಕಳೆದುಕೊಂಡಿದ್ದಾರೆ.
ಎರಡು ವಿಗ್ರಹಗಳನ್ನು ವಿಸರ್ಜಿಸಲು ಗ್ರಾಮಸ್ಥರು ನದಿಗೆ ಇಳಿದ ವೇಳೆ ಈ ದುರಂತ ಸಂಭವಿಸಿದೆ. ಪ್ರವಾಹದ ತೀವ್ರತೆಗೆ ಸಿಲುಕಿ ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ.
ಘಟನೆಯ ನಂತರ, ಪೊಲೀಸರು ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು. ಜೀವ ಉಳಿಸಲು ಸ್ಟೇಷನ್ ಹೌಸ್ ಆಫೀಸರ್ ಮದನ್ ಸಿಂಗ್ ಅವರು ಸಮವಸ್ತ್ರದಲ್ಲೇ ನದಿಗೆ ಹಾರುತ್ತಿರುವುದು ಕಂಡುಬಂದಿದೆ. ತೀವ್ರ ಪ್ರಯತ್ನಗಳ ನಂತರ, ಭೋಲಾ ಎಂಬ ಯುವಕನನ್ನು ರಕ್ಷಿಸಲಾಯಿತು. ನಂತರ, ಡೈವರ್‌ಗಳು ಇನ್ನೂ ಮೂರು ಶವಗಳನ್ನು ಹೊರತೆಗೆದರು.
ಎರಡನೇ ಘಟನೆ ಆಗ್ರಾ ಜಿಲ್ಲೆಯ ತಾಜ್‌ಗಂಜ್ ಪ್ರದೇಶದ ಕರ್ಭನಾ ಗ್ರಾಮದಲ್ಲಿ ನಡೆದಿದ್ದು. ಇಬ್ಬರು ಯುವಕರು ನಾಪತ್ತೆಯಾಗಿದ್ದು, ಇತರ ಐದು ಯುವಕರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
Advertisement