
ನವದೆಹಲಿ: ಮತದಾನ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಹೈಕೋರ್ಟ್‌ಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸೋಮವಾರ ಪ್ರತಿಪಾದಿಸಿದ್ದಾರೆ.
ಇಂದು ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜ್ಞಾನೇಶ್ ಕುಮಾರ್ ಅವರು, ಸಿಸಿಟಿವಿ ಡೇಟಾದಂತಹ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡುವುದು ಮತದಾರರ ಗೌಪ್ಯತೆ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.
ಮತದಾನದ ದೃಶ್ಯಾವಳಿಗಳನ್ನು ವೆಬ್‌ಕಾಸ್ಟ್ ಮಾಡುವುದು ಫಾರ್ಮ್ 17Aಗೆ ಹೋಲುತ್ತದೆ. ಇದನ್ನು ಮತ ಚಲಾಯಿಸಿದ ಮತ್ತು ಮತ ಚಲಾಯಿಸದ ಮತದಾರರ ಗುರುತನ್ನು ರಕ್ಷಿಸಲು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಅವರು ತಿಳಿಸಿದರು.
ನಿರ್ದಿಷ್ಟ ಫಲಿತಾಂಶದ ವಿರುದ್ಧ ಅರ್ಜಿ ಸಲ್ಲಿಸಿದಾಗ ಸಂಬಂಧಿತ ಹೈಕೋರ್ಟ್ ಸಿಸಿಟಿವಿ ದೃಶ್ಯಗಳನ್ನು ಕೇಳಿದರೆ ಹಂಚಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು.
ಚುನಾವಣಾ ನಿಯಮಗಳ ಪ್ರಕಾರ, ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ಮತದಾರರ ಹೆಸರನ್ನು ಹೊಂದಿರುವ ಫಾರ್ಮ್ 17A ಅನ್ನು ನ್ಯಾಯಾಲಯಗಳನ್ನು ಹೊರತುಪಡಿಸಿ ಇತರ ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ ಎಂದರು.
Advertisement