
ಭೋಪಾಲ್: "ವಿಷಕಾರಿ" ಕೆಮ್ಮಿನ ಸಿರಪ್ ಸೇವಿಸಿದ ನಂತರ ಮೂತ್ರಪಿಂಡ ವೈಫಲ್ಯದಿಂದ ಚಿಂದ್ವಾರದ 14 ಮಕ್ಕಳು ಸಾವಿನ ಪ್ರಕರಣದ ತನಿಖೆಯ ಮಧ್ಯೆ, ಮಧ್ಯಪ್ರದೇಶ ಸರ್ಕಾರ ಸೋಮವಾರ ಇಬ್ಬರು ಔಷಧ ನಿರೀಕ್ಷಕರು ಹಾಗೂ ಆಹಾರ ಮತ್ತು ಔಷಧ ಆಡಳಿತದ ಉಪ ನಿರ್ದೇಶಕರನ್ನು ಅಮಾನತುಗೊಳಿಸಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಇಂದು ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ರಾಜ್ಯ ಔಷಧ ನಿಯಂತ್ರಕ ದಿನೇಶ್ ಮೌರ್ಯ ಅವರನ್ನು ವರ್ಗಾವಣೆ ಮಾಡಿದ್ದಾರೆ.
ಅಮಾನತುಗೊಂಡ ಔಷಧ ನಿರೀಕ್ಷಕರನ್ನು ಗೌರವ್ ಶರ್ಮಾ ಮತ್ತು ಶರದ್ ಕುಮಾರ್ ಜೈನ್ ಎಂದು ಗುರುತಿಸಲಾಗಿದೆ, ಅವರನ್ನು ಕ್ರಮವಾಗಿ ಚಿಂದ್ವಾರ ಮತ್ತು ಜಬಲ್ಪುರದಲ್ಲಿ ನಿಯೋಜಿಸಲಾಗಿತ್ತು. ಉಪನಿರ್ದೇಶಕ ಶೋಭಿತ್ ಕೋಸ್ಟಾ ಅವರನ್ನು ಸಹ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕ್ಕಳ ದುರಂತ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
14 ಮಕ್ಕಳ ಸಾವಿನ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದು, ಚಿಂದ್ವಾರದ ಡಾ. ಪ್ರವೀಣ್ ಸೋನಿ ಅವರನ್ನು ನಿರ್ಲಕ್ಷ್ಯ ಆರೋಪದ ಮೇಲೆ ಬಂಧಿಸಲಾಗಿದೆ. ಅಲ್ಲದೆ ಕೋಲ್ಡ್ರಿಫ್ ಕೆಮ್ಮು ಸಿರಪ್ ತಯಾರಿಕಾ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Advertisement