
ಚಂಡೀಗಢ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 14 ಮಕ್ಕಳ ಸಾವಿಗೆ ಕಾರಣ ಎಂದು ಶಂಕಿಸಲಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟ ಮತ್ತು ವಿತರಣೆಯನ್ನುಇದೀಗ ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲೂ ನಿಷೇಧಿಸಲಾಗಿದೆ.
ಪಂಜಾಬ್ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಹೊರಡಿಸಿದ ಆದೇಶದಲ್ಲಿ, "ಕೋಲ್ಡ್ರಿಫ್ ಸಿರಪ್ ಅನ್ನು ಸರ್ಕಾರಿ ವಿಶ್ಲೇಷಕರು, ಔಷಧ ಪರೀಕ್ಷಾ ಪ್ರಯೋಗಾಲಯ ಮತ್ತು ಮಧ್ಯಪ್ರದೇಶದ ಎಫ್‌ಡಿಎ ಗುಣಮಟ್ಟದ್ದಾಗಿಲ್ಲ ಎಂದು ಘೋಷಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಔಷಧಿಯಲ್ಲಿ ಕಲಬೆರಕೆಯಾಗಿದೆ ಎಂದು ವರದಿಯಾಗಿದೆ, ಏಕೆಂದರೆ ಇದು ಡೈಥಿಲೀನ್ ಗ್ಲೈಕಾಲ್ (ಶೇಕಡಾ 46.28 w/v) ಅನ್ನು ಹೊಂದಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಈ ಉತ್ಪನ್ನವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪಂಜಾಬ್ ರಾಜ್ಯದಲ್ಲಿ ಮಾರಾಟ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ'' ಎಂದು ತಿಳಿಸಿದೆ.
ಪಂಜಾಬ್‌ನಲ್ಲಿರುವ ಎಲ್ಲಾ ಚಿಲ್ಲರೆ ವ್ಯಾಪಾರಿಗಳು, ವಿತರಕರು, ನೋಂದಾಯಿತ ವೈದ್ಯಕೀಯ ವೃತ್ತಿಪರರು ಮತ್ತು ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳು ಸದರಿ ಉತ್ಪನ್ನವನ್ನು ಖರೀದಿಸಬಾರದು, ಮಾರಾಟ ಮಾಡಬಾರದು ಅಥವಾ ಬಳಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏತನ್ಮಧ್ಯೆ, ಹಿಮಾಚಲ ಪ್ರದೇಶದಲ್ಲೂ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Advertisement