
ಮುಂಬೈ: 26/11 ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತ ಪ್ರತೀಕಾರ ತೀರಿಸಿಕೊಳ್ಳುವುದನ್ನು ತಡೆದವರು ಯಾರು ಎಂಬುದನ್ನು ಕಾಂಗ್ರೆಸ್, ದೇಶದ ಮುಂದೆ ಬಹಿರಂಗಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
ಇಂದು ನವಿ ಮುಂಬೈನಲ್ಲಿ ಹೊಸದಾಗಿ ನಿರ್ಮಿಸಲಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, "ಮಾಜಿ ಕೇಂದ್ರ ಗೃಹ ಸಚಿವರೂ ಆಗಿರುವ ಕಾಂಗ್ರೆಸ್ ನಾಯಕರೊಬ್ಬರು, 2008 ರಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತದ ಸೇನಾ ಪ್ರತೀಕಾರವನ್ನು ಒಂದು ದೇಶ ತಡೆಯಿತು ಎಂದು ಹೇಳಿದ್ದಾರೆ. ಪಕ್ಷ ಆ ಬಗ್ಗೆ ಸ್ಪಷ್ಟಪಡಿಸಬೇಕು" ಎಂದರು.
"ಕಾಂಗ್ರೆಸ್‌ನ ಈ ದೌರ್ಬಲ್ಯ ಭಯೋತ್ಪಾದಕರನ್ನು ಬಲಪಡಿಸಿತು ಮತ್ತು ದೇಶದ ಭದ್ರತೆಯನ್ನು ದುರ್ಬಲಗೊಳಿಸಿತು" ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತವು ಸೇನಾ ಪ್ರತೀಕಾರ ತೀರಿಸಿಕೊಳ್ಳುವುದನ್ನು ಯಾರು ತಡೆದರು ಎಂದು ತಿಳಿಯುವ ಹಕ್ಕು ದೇಶಕ್ಕೆ ಇದೆ ಎಂದು ಮೋದಿ ಹೇಳಿದರು.
"ನಮಗೆ, ನಮ್ಮ ರಾಷ್ಟ್ರ ಮತ್ತು ಅದರ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗಿಂತ ಬೇರೇನೂ ಮುಖ್ಯವಲ್ಲ" ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಾರಂಭಿಸಲಾದ ಆಪರೇಷನ್ ಸಿಂದೂರ್ ಅನ್ನು ಉಲ್ಲೇಖಿಸಿ ಮೋದಿ ಹೇಳಿದರು.
“ಮುಂಬೈ ಆರ್ಥಿಕ ರಾಜಧಾನಿ ನಗರ ಮಾತ್ರವಲ್ಲ, ಭಾರತದ ಅತ್ಯಂತ ಚೈತನ್ಯಶೀಲ ನಗರಗಳಲ್ಲಿ ಒಂದಾಗಿದೆ. 2008ರಲ್ಲಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಲು ಇದೇ ಕಾರಣ. ಆದರೆ ಅಂದಿನ ಕಾಂಗ್ರೆಸ್ ಸರ್ಕಾರ ದೌರ್ಬಲ್ಯದ ಸಂದೇಶವನ್ನು ನೀಡಿತು” ಎಂದು ಪ್ರಧಾನಿ ಮೋದಿ ಟೀಕಿಸಿದರು.
ಇತ್ತೀಚಿಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು, ಮುಂಬೈ ದಾಳಿಯ ನಂತರ ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದವು. ಆದರೆ ಅಂತರಾಷ್ಟ್ರೀಯ ಒತ್ತಡದಿಂದಾಗಿ, ಭಾರತ, ಪಾಕಿಸ್ತಾನದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿತು ಎಂದು ಹೇಳಿದ್ದರು.
Advertisement