
ಐಷಾರಾಮಿ ಕಾರು ಕಳ್ಳಸಾಗಣೆ ಜಾಲವನ್ನು ಗುರಿಯಾಗಿಸಿಕೊಂಡು ಕೇರಳ ಮತ್ತು ತಮಿಳುನಾಡಿನಾದ್ಯಂತ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಇಂದು ದಾಳಿ ನಡೆಸಿ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದೆ.
ಮಲಯಾಳಂ ಖ್ಯಾತ ನಟರಾದ ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್ ಮತ್ತು ಅಮಿತ್ ಚಕ್ಕಲಕ್ಕಲ್ ಅವರ ಕಚೇರಿಗಳನ್ನು ಸಹ ಈ ಸಂದರ್ಭಗಳಲ್ಲಿ ಶೋಧಿಸಲಾಗಿದೆ.
ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿ ನಡೆದ ದಾಳಿಗಳು, ಭೂತಾನ್ ಮತ್ತು ನೇಪಾಳದಿಂದ ಅಕ್ರಮ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್‌ಗಳು, ಡಿಫೆಂಡರ್‌ಗಳು ಮತ್ತು ಮಸೆರಾಟಿಸ್‌ನಂತಹ ಉನ್ನತ ದರ್ಜೆಯ ಕಾರುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ವಾಹನ ಮಾಲೀಕರು,ಆಟೋ ವರ್ಕ್ ಶಾಪ್ ಗಳು ಮತ್ತು ಡೀಲರ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿವೆ.
ಕೊಯಮತ್ತೂರು ಮೂಲದ ಜಾಲವು ಭಾರತೀಯ ಸೇನೆ, ಅಮೆರಿಕ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದಿಂದ ನಕಲಿ ದಾಖಲೆಗಳನ್ನು ತಯಾರಿಸಿ ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ವಾಹನಗಳನ್ನು ವಂಚನೆ ಮಾಡಿ ನೋಂದಾಯಿಸಿಕೊಂಡಿದೆ.
ನಂತರ ಈ ಕಾರುಗಳನ್ನು ಸಿನಿಮಾ ನಟರು ಸೇರಿದಂತೆ ವಿಐಪಿಗಳು ಮತ್ತು ಸೆಲೆಬ್ರಿಟಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಅಕ್ರಮ ವಿದೇಶಿ ವಿನಿಮಯ ವಹಿವಾಟು ಮತ್ತು ಹವಾಲಾ ಪಾವತಿಗಳನ್ನು ಒಳಗೊಂಡ FEMA ಸೆಕ್ಷನ್ 3, 4 ಮತ್ತು 8 ರ ಮೇಲ್ನೋಟದ ಉಲ್ಲಂಘನೆಗಳನ್ನು ED ಶಂಕಿಸಿದೆ.
ಇತ್ತೀಚಿನ ಕಸ್ಟಮ್ಸ್ ತನಿಖೆಯಿಂದ ಈ ಪ್ರಕರಣ ಹುಟ್ಟಿಕೊಂಡಿದೆ. ಇದು ಚಿನ್ನ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಸಂಭಾವ್ಯ ಸಂಪರ್ಕಗಳನ್ನು ಸಹ ಬಹಿರಂಗಪಡಿಸಿದೆ.
ಸೆಪ್ಟೆಂಬರ್ 23 ರಂದು, 'ಆಪರೇಷನ್ ನಮ್ಖೋರ್' ನ ಭಾಗವಾಗಿ, ಕಸ್ಟಮ್ಸ್ ಅಧಿಕಾರಿಗಳು ಮೂವರು ನಟರ ನಿವಾಸಗಳು ಸೇರಿದಂತೆ ಸುಮಾರು 30 ಸ್ಥಳಗಳಿಂದ 36 ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡಿದ್ದರು.
ಸಂಬಂಧಿತ ಬೆಳವಣಿಗೆಯಲ್ಲಿ, ಕೇರಳ ಹೈಕೋರ್ಟ್ ನಿನ್ನೆ ದುಲ್ಕರ್ ಸಲ್ಮಾನ್ ಅವರ ವಶಪಡಿಸಿಕೊಂಡ ವಾಹನದ ತಾತ್ಕಾಲಿಕ ಬಿಡುಗಡೆಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿತು.
ಸಲ್ಮಾನ್ ತಮ್ಮ ಅರ್ಜಿಯಲ್ಲಿ, ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯು ದೆಹಲಿಗೆ ಕಾರನ್ನು ರವಾನಿಸಿದೆ ಎಂದು ಸೂಚಿಸುವ ದಾಖಲೆಗಳೊಂದಿಗೆ, ತನ್ನ ಕಾರನ್ನು ಕಾನೂನುಬದ್ಧವಾಗಿ ಯಾವುದೇ ಅಕ್ರಮಗಳಿಲ್ಲದೆ ಖರೀದಿಸಿದ್ದೇನೆ ಎಂದು ಹೇಳಿಕೊಂಡಿದ್ದರು.
Advertisement