
ನವದೆಹಲಿ: ಬಿಹಾರ ಮಹಾಘಟಬಂಧನ್(ಮಹಾಮೈತ್ರಿಕೂಟ)ದಲ್ಲಿ ಸೀಟು ಹಂಚಿಕೆ ಮಾತುಕತೆ ಚುರುಕುಗೊಂಡಿದ್ದು, ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 57 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಮತ್ತು ಎರಡು ಸ್ಥಾನಗಳನ್ನು 'ಇಂಡಿಯನ್ ಇನ್ಕ್ಲೂಸಿವ್ ಪಾರ್ಟಿ (ಐಐಪಿ)'ಗೆ ಬಿಟ್ಟುಕೊಡಲಿದೆ ಎಂದು ತಿಳಿದುಬಂದಿದೆ.
ಮಿತ್ರಪಕ್ಷಗಳೊಂದಿಗಿನ ಮಾತುಕತೆಯ ನಡುವೆ, ಕಾಂಗ್ರೆಸ್ ಉನ್ನತ ನಾಯಕತ್ವವು ಗುರುವಾರ ವಿಧಾಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿತು ಮತ್ತು ಅದರ 25 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ತನ್ನ 19 ಹಾಲಿ ಶಾಸಕರ ಪೈಕಿ 17 ಜನರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಹಾಲಿ ಶಾಸಕರಲ್ಲಿ ಒಬ್ಬರಾದ ಮುರಾರಿ ಪ್ರಸಾದ್ ಗೌತಮ್ ಬುಧವಾರ ರಾಜೀನಾಮೆ ನೀಡಿದ್ದರಿಂದ ಅವರ ಹೆಸರನ್ನು ಪರಿಗಣಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮುರಾರಿ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳಿವೆ.
ಕಳಪೆ ಪ್ರದರ್ಶನ ಅಥವಾ ಆಂತರಿಕ ಸಮೀಕ್ಷಾ ವರದಿಗಳ ಆಧಾರದ ಕೆಲವು ಹಾಲಿ ಶಾಸಕರನ್ನು ಕೈಬಿಡಲು ಕಾಂಗ್ರೆಸ್ ನಾಯಕರ ಒಂದು ವರ್ಗ ಉತ್ಸುಕರಾಗಿದ್ದರೂ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕತ್ವವು ಹಾಲಿ ಶಾಸಕರನ್ನು ಕೈಬಿಡುವುದರಿಂದ ಭಿನ್ನಮತಕ್ಕೆ ಕಾರಣವಾಗಬಹುದು ಮತ್ತು ಬಂಡಾಯವಾಗಿ ಸ್ಪರ್ಧಿಸಬಹುದು ಎಂಬ ಕಾರಣಕ್ಕೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನಿರ್ಧರಸಲಾಗಿದೆ.
ಕಾಂಗ್ರೆಸ್ ಸುಮಾರು 55 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು ಎಂದು ಮೂಲಗಳು ತಿಳಿಸಿವೆ. ಸೀಮಾಂಚಲ್, ಮಿಥಿಲಾಂಚಲ್ ಮತ್ತು ಉತ್ತರ ಬಿಹಾರದ ಕೆಲವು ಸ್ಥಾನಗಳಲ್ಲಿ ತನ್ನ ಭದ್ರಕೋಟೆಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
"ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳನ್ನು ನಿರ್ಧರಿಸಲು ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಮತ್ತೆ ಸಭೆ ನಡೆಯಲಿದೆ" ಎಂದು ನಾಯಕರೊಬ್ಬರು ಹೇಳಿದ್ದಾರೆ.
ಇಲ್ಲಿನ ಇಂದಿರಾ ಭವನದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ(ಸಿಇಸಿ) ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಚರ್ಚೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
Advertisement