
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೋಲ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಾಪತ್ತೆಯಾಗಿದ್ದ ಮತ್ತೊಬ್ಬ ಎಲೈಟ್ ಪ್ಯಾರಾ ಕಮಾಂಡೋನ ಮೃತದೇಹ ಪತ್ತೆಯಾಗಿದೆ.
"ಅನಂತನಾಗ್ ಜಿಲ್ಲೆಯ ಕೊಕರ್ನಾಗ್ ಪ್ರದೇಶದ ಅರಣ್ಯಗಳಲ್ಲಿ ಭಯೋತ್ಪಾದಕರ ಪತ್ತೆಗಾಗಿ ನಡೆಯುತ್ತಿದ್ದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆಯಾಗಿದ್ದಾರೆ. ನಿನ್ನೆ ಒಬ್ಬರು ಪ್ಯಾರಾ ಕಮಾಂಡೋನ ಮೃತದೇಹವನ್ನು ಭದ್ರತಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದರು.
ಶೋಧ ಕಾರ್ಯಾಚರಣೆಯ ಸಮಯದಲ್ಲಿ ಇಂದು ಭದ್ರತಾ ಪಡೆ ಸಿಬ್ಬಂದಿ ಮತ್ತೊಬ್ಬ ಪ್ಯಾರಾ ಕಮಾಂಡೋನ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತ ಪ್ಯಾರಾ ಕಮಾಂಡೋಗಳಿಬ್ಬರ ಗುರುತನ್ನು ಖಚಿತಪಡಿಸಲಾಗುತ್ತಿದೆ. ಪ್ರತಿಕೂಲ ಹವಾಮಾನದಿಂದಾಗಿ ಕಷ್ಟಕರವಾದ ಭೂಪ್ರದೇಶವನ್ನು ಹೊಂದಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಹವಾಮಾನ ಸಂಬಂಧಿತ ಘಟನೆಯಲ್ಲಿ ಇಬ್ಬರೂ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಅಕ್ಟೋಬರ್ 6 ಮತ್ತು 7 ರ ಮಧ್ಯರಾತ್ರಿ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಈ ಇಬ್ಬರು ಎಲೈಟ್ ಪ್ಯಾರಾ ಕಮಾಂಡೋಗಳು ಕಾಣೆಯಾಗಿದ್ದರು.
ಕಾಣೆಯಾದ ಕಮಾಂಡೋಗಳನ್ನು ಪತ್ತೆಹಚ್ಚಲು ನೂರಾರು ಸೇನಾ, ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿ, ದಟ್ಟವಾದ ಅರಣ್ಯ, ಕಠಿಣ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಿದ್ದರು.
ಕಾಣೆಯಾದ ಪ್ಯಾರಾ ಕಮಾಂಡೋಗಳನ್ನು ಪತ್ತೆಹಚ್ಚಲು ಸೇನೆಯು ಡ್ರೋನ್‌ಗಳು, ಯುಎವಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸಹ ಕರೆಸಿತ್ತು.
Advertisement