
ಲಖನೌ: ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಕುರಿತು ಸಂಭಾಲ್‌ನ ಸಮಾಜವಾದಿ ಸಂಸದ ಜಿಯಾ ಉರ್ ರೆಹಮಾನ್ ಶನಿವಾರ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ತಾಲಿಬಾನ್ ನ್ನು "ಬೆಂಬಲಿಸುವ" ಹೇಳಿಕೆಗಾಗಿ ಬಿಜೆಪಿ ಸಂಭಾಲ್ ನ ಆಗಿನ ಸಂಸದ ಡಾ. ಶಫಿಕುರ್ ರೆಹಮಾನ್ ಬಾರ್ಕ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು ಎಂದು ಕಿಡಿಕಾರಿದ್ದಾರೆ.
ಅಫ್ಘಾನ್ ವಿದೇಶಾಂಗ ಸಚಿವ ಗುರುವಾರದಿಂದ 6 ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾಲಿಬಾನ್ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಭಾರತಕ್ಕೆ ಭೇಟಿ ನೀಡಿದ ಮೊದಲ ಹಿರಿಯ ತಾಲಿಬಾನ್ ಸಚಿವರಾಗಿದ್ದಾರೆ. ಭಾರತ ಇನ್ನೂ ತಾಲಿಬಾನ್ ಸರ್ಕಾರಕ್ಕೆ ಅಧಿಕೃತ ಸ್ಥಾನಮಾನಗಳನ್ನು ನೀಡಿಲ್ಲ.
ಅಫ್ಘಾನ್ ವಿದೇಶಾಂಗ ಸಚಿವ ಮುತ್ತಕಿ, ಶನಿವಾರ ದಕ್ಷಿಣ ಏಷ್ಯಾದ ಇಸ್ಲಾಮಿಕ್ ಧಾರ್ಮಿಕ ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳ ಪೈಕಿ ಒಂದಾದ ದಾರುಲ್ ಉಲೂಮ್ ದಿಯೋಬಂದ್‌ಗೆ ಭೇಟಿ ನೀಡಿದ್ದಾರೆ.
ಈ ಭೇಟಿಯ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರೆಹಮಾನ್, "ಭಾರತ ಸರ್ಕಾರವೇ ತಾಲಿಬಾನ್ ಸಚಿವ ಮುತ್ತಕಿಯನ್ನು ಭಾರತಕ್ಕೆ ಆಹ್ವಾನಿಸಿ ಸ್ವಾಗತಿಸಿದಾಗ, ಯಾರೂ ಯಾವುದೇ ಪ್ರಶ್ನೆಗಳನ್ನು ಎತ್ತುವುದಿಲ್ಲ. ಆದರೆ ಸಂಭಾಲ್ ನ ಸಮಾಜವಾದಿ ಪಕ್ಷದ ನಾಯಕ ಡಾ. ಶಫಿಕುರ್ ರೆಹಮಾನ್ ಬಾರ್ಕ್ ತಾಲಿಬಾನ್ ಬಗ್ಗೆ ಹೇಳಿಕೆ ನೀಡಿದಾಗ, ಕಟುವಾಗಿ ಪ್ರತಿಕ್ರಿಯೆ ನೀಡಿದ್ದ ಯೋಗಿ ಆದಿತ್ಯನಾಥ್ ಬಾರ್ಕ್ ನಾಚಿಕೆಪಡಬೇಕು ಎಂದು ಹೇಳಿದ್ದರು ಮತ್ತು ಯುಪಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು." ಎಂದುಜಿಯಾ ಉರ್ ರೆಹಮಾನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಈಗ, ಅದೇ ತಾಲಿಬಾನ್ ಸಚಿವರು ಆಗ್ರಾ ಮತ್ತು ದಿಯೋಬಂದ್‌ನಲ್ಲಿರುವ ತಾಜ್ ಮಹಲ್‌ಗೆ ಭೇಟಿ ನೀಡುತ್ತಾರೆ, ಮತ್ತು ಯೋಗಿ ಸರ್ಕಾರ ಅವರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುತ್ತದೆ. ಈ ದ್ವಿಮುಖ ನೀತಿ ಏಕೆ?? ಈಗ, ಯಾರು ನಾಚಿಕೆಪಡಬೇಕು ಮತ್ತು ಯಾರ ವಿರುದ್ಧ ವರದಿ ಸಲ್ಲಿಸಬೇಕು?" ಎಂದು ರೆಹಮಾನ್ ಪ್ರಶ್ನಿಸಿದ್ದಾರೆ.
ಆಗಸ್ಟ್ 2021 ರಲ್ಲಿ, ಸಂಭಾಲ್‌ನ ಆಗಿನ ಲೋಕಸಭಾ ಸಂಸದ ಶಫೀಕರ್ ರೆಹಮಾನ್ ಬಾರ್ಕ್ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಅವರು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದರು ಮತ್ತು ಅದನ್ನು ಭಾರತದ ಸ್ವಾತಂತ್ರ್ಯ ಹೋರಾಟದೊಂದಿಗೆ ಸಮೀಕರಿಸಿದ್ದರು ಎಂಬ ಆರೋಪದ ಮೇಲೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.
ಬಿಜೆಪಿ ನಾಯಕ ರಾಜೇಶ್ ಸಿಂಘಾಲ್ ಅವರ ದೂರಿನ ನಂತರ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ (ದೇಶದ್ರೋಹ) ಅಡಿಯಲ್ಲಿ ಆರೋಪ ಹೊರಿಸಲಾಯಿತು.
ಆಗ ಸಂಸದರ ವಿರುದ್ಧ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಿತ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಯಿತು.
ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಬಾರ್ಕ್, ತಾಲಿಬಾನ್ ತಮ್ಮ ದೇಶವನ್ನು ಸ್ವತಂತ್ರಗೊಳಿಸಲು ಬಯಸುತ್ತಿದೆ ಮತ್ತು ಅದು ಅಫ್ಘಾನಿಸ್ತಾನದ ಆಂತರಿಕ ವಿಷಯ ಎಂದು ಹೇಳಿದ್ದರು.
ತಾಲಿಬಾನ್ ಸ್ವಾಧೀನವನ್ನು ಅನುಮೋದಿಸುತ್ತಾ, ಆಫ್ಘನ್ನರು ತಮ್ಮ ಸ್ವಂತ ದೇಶವನ್ನು ಅವರು ಬಯಸಿದ ರೀತಿಯಲ್ಲಿ ನಡೆಸಲು ಬಯಸುತ್ತಾರೆ ಎಂದು ಬಾರ್ಕ್ ಹೇಳಿದ್ದರು.
Advertisement