
ನವದೆಹಲಿ: ಶೃಂಗೇರಿ ಶಾರದಾ ಪೀಠಕ್ಕೆ ಸೇರಿದ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ನ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ ಎಂದು ದೆಹಲಿ ಪೊಲೀಸರು ಸೋಮವಾರ ಹೇಳಿದ್ದಾರೆ.
ಇಂದು ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಚೈತನ್ಯಾನಂದ ಸರಸ್ವತಿ ಅವರ ಮನವಿಯ ಮೇರೆಗೆ ಪೊಲೀಸರು ನೀಡಿದ ಉತ್ತರದಲ್ಲಿ ಇದನ್ನು ತಿಳಿಸಲಾಗಿದೆ.
ಸನ್ಯಾಸಿಯು ಖಾವಿ ಧರಿಸಲು ಮತ್ತು ಧಾರ್ಮಿಕ ಪುಸ್ತಕಗಳನ್ನು ಓದಲು ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಂಗ ಬಂಧನದಲ್ಲಿರುವ ಚೈತನ್ಯಾನಂದ ಅವರು ಅರ್ಜಿ ಸಲ್ಲಿಸಿದ್ದಾರೆ.
ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶ ಅನಿಮೇಶ್ ಕುಮಾರ್ ಅವರು ಈ ಅರ್ಜಿಯ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ(ಎಪಿಪಿ), ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ ಮತ್ತು ಅವರು ಜೈಲಿನಲ್ಲಿ ಖಾವಿ ಧರಿಸುವುದರಿಂದ ಕಾನೂನು, ಸುವ್ಯವಸ್ಥೆ ಸಮಸ್ಯೆಯಾಗಬಹುದು ಎಂದು ಹೇಳಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಚೈತನ್ಯಾನಂದ ಸರಸ್ವತಿ ಪರ ವಕೀಲರಾದ ಮನೀಶ್ ಗಾಂಧಿ ಅವರು, ಜೈಲಿನಲ್ಲಿ ತಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಹೇಗೆ ಉಂಟಾಗುತ್ತದೆ. ಇದು ನಮ್ಮ ತಿಳುವಳಿಕೆಗೆ ಮೀರಿದ್ದು ಎಂದು ವಾದಿಸಿದರು.
ಸರಸ್ವತಿ ಒಬ್ಬ ಸನ್ಯಾಸಿ ಮತ್ತು ಅವರಿಗೆ ದೀಕ್ಷೆ ನೀಡಲಾಗಿದೆ. ಅವರ ಹಿಂದಿನ ಹೆಸರು ಪಾರ್ಥಸಾರಥಿ. ದೀಕ್ಷೆ ಪಡೆದ ನಂತರ, ಅವರ ಹೆಸರನ್ನು ಚೈತನ್ಯಾನಂದ ಸರಸ್ವತಿ ಎಂದು ಬದಲಾಯಿಸಲಾಯಿತು. ಈ ನಿಲುವನ್ನು ಮಠ ಪ್ರಶ್ನಿಸಿಲ್ಲ ಎಂದರು.
ಚೈತನ್ಯಾನಂದ ಸರಸ್ವತಿ ದೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಆರೋಪಿ ವಕೀಲ ಗಾಂಧಿ ಸಮಯ ಕೋರಿದರು. ನ್ಯಾಯಾಲಯವು ಸಮಯ ನೀಡಿ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30 ಕ್ಕೆ ನಿಗದಿಪಡಿಸಿತು.
Advertisement