
ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಬಸ್ ಹೊತ್ತಿ ಉರಿದಿದೆ. ದುರಂತದಲ್ಲಿ ಮೂವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ ಸುಮಾರು 15 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇನ್ನು 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಜೈಸಲ್ಮೇರ್-ಜೋಧಪುರ ಹೆದ್ದಾರಿಯ ಥೈಯಾತ್ ಗ್ರಾಮದ ಬಳಿ ಮಧ್ಯಾಹ್ನ 3:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸುಮಾರು 57 ಪ್ರಯಾಣಿಕರು ಬಸ್‌ನಲ್ಲಿದ್ದರು. ಬಸ್ ಎಂದಿನಂತೆ ಮಧ್ಯಾಹ್ನ 3 ಗಂಟೆಗೆ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೊರಟಿತು. ಜೈಸಲ್ಮೇರ್‌ನಿಂದ ಹೊರಟ ಬಸ್ ಕೇವಲ 20 ಕಿಲೋಮೀಟರ್ ದೂರಕ್ಕೆ ಹೋಗುತ್ತಿದ್ದಂತೆ ಬಸ್‌ನ ಹಿಂಭಾಗದಿಂದ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿತು.
ಬೆಂಕಿ ಹೊತ್ತಿಕೊಂಡ ತಕ್ಷಣ, ಪ್ರಯಾಣಿಕರು ಕಿರುಚುತ್ತಾ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಕಿಟಕಿಗಳ ಮೂಲಕ ಹೊರಗೆ ಹಾರಲು ಪ್ರಾರಂಭಿಸಿದರು. ಹಲವರ ಬಟ್ಟೆ ಮತ್ತು ವಸ್ತುಗಳು ಸುಟ್ಟುಹೋಗಿವೆ. ಸ್ಥಳೀಯರು ಮತ್ತು ದಾರಿಹೋಕರು ತಕ್ಷಣ ಸಹಾಯ ಮಾಡಲು ಧಾವಿಸಿ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಬೇಗನೆ ಬಂದಿದ್ದು ಸಾಕಷ್ಟು ಸಮಯದ ನಂತರ ಬೆಂಕಿಯನ್ನು ನಂದಿಸಲಾಯಿತು. ಪೊಲೀಸರ ಪ್ರಕಾರ, ಬೆಂಕಿಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು. ಅಗ್ನಿಶಾಮಕ ಅಧಿಕಾರಿ ರಾಥೋಡ್ ಅವರು, ನಾವು ಅಲ್ಲಿಗೆ ಹೋಗುವಷ್ಟರಲ್ಲೇ ಬಸ್ ಗೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತ್ತು. ನಾವು ಬಹಳ ಕಷ್ಟದಿಂದ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದೆವು ಎಂದರು.
ಅನೇಕ ಪ್ರಯಾಣಿಕರ ಮುಖ, ಕೈ, ಕಾಲು ಮತ್ತು ದೇಹದ ವಿವಿಧ ಭಾಗಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ಲಾಥಿ ನಿವಾಸಿ ಒಮರಮ್ ಭಿಲ್ (30) ಅವರನ್ನು ಜೋಧಪುರಕ್ಕೆ ಕರೆದೊಯ್ಯಲಾಗಿದೆ. ಇಮಾಮತ್ (30) ಮತ್ತು ಅವರ ಮಗ ಯೂನಸ್ ಕೂಡ ಗಾಯಗೊಂಡಿದ್ದು, ಅವರು ಜೋಧಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement