
ರೋಹ್ಟಕ್: ಹರಿಯಾಣ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಆತ್ಮಹತ್ಯೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ.
ರೋಹ್ಟಕ್‌ನ ಸೈಬರ್ ಸೆಲ್‌ನಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿ ಸಂದೀಪ್ ಕುಮಾರ್ ಅವರು ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂದೀಪ್ ಅವರು ಸಾವಿಗೆ ಮುನ್ನ ರೆಕಾರ್ಡ್ ಮಾಡಲಾದ ವಿಡಿಯೋ ಸಂದೇಶದಲ್ಲಿ, ವೈ ಪೂರಣ್ ಕುಮಾರ್ ಒಬ್ಬ "ಭ್ರಷ್ಟ ಪೊಲೀಸ್" ಆಗಿದ್ದು, ತನ್ನ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ವೈ ಪೂರಣ್ ಕುಮಾರ್ ಅವರನ್ನು ರೋಹ್ಟಕ್ ವ್ಯಾಪ್ತಿಯಲ್ಲಿ ನಿಯೋಜಿಸಿದ ನಂತರ, ಅವರು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟ ಅಧಿಕಾರಿಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿದರು ಎಂದು ಸಂದೀಪ್ ಆರೋಪಿಸಿದ್ದಾರೆ.
"ಈ ಜನ ಫೈಲ್‌ಗಳನ್ನು ತಡೆ ಹಿಡಿದರು. ವರ್ಗಾವಣೆ ಕೋರಿದವರಿಗೆ ಕರೆ ಮಾಡಿ ಹಣ ಕೇಳುವ ಮೂಲಕ ಅವರನ್ನು ಮಾನಸಿಕವಾಗಿ ಹಿಂಸಿಸಿದರು. ವರ್ಗಾವಣೆಗೆ ಪ್ರತಿಯಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಯಿತು" ಎಂದು ಗಂಭೀರ ಆರೋಪ ಮಾಡಿದ್ದಾರೆ.
ವೈ ಪೂರಣ್ ಕುಮಾರ್ ಅವರ ಸಾವಿಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಅಧಿಕಾರಿಗಳಲ್ಲೊಬ್ಬರಾದ ಮಾಜಿ ರೋಹ್ಟಕ್ ಎಸ್‌ಪಿ ನರೇಂದ್ರ ಬಿಜಾರ್ನಿಯಾ ಅವರಿಗೆ ಸಂದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ಅವರು ಸಾವಿಗೀಡಾದ ಪೊಲೀಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಡೆತ್ ನೋಟ್ ನಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಒತ್ತಾಯಿಸಿದ ದಿನವೇ ಈ ಆಘಾತಕಾರಿ ಬೆಳವಣಿಗೆ ನಡೆದಿದೆ.
2001 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಕುಮಾರ್ ಅವರು ಅಕ್ಟೋಬರ್ 7 ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
Advertisement