
ಪಾಟ್ನಾ: ನವೆಂಬರ್ 6 ಮತ್ತು ನವೆಂಬರ್ 11 ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಮಂಗಳವಾರ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಬಿಡುಗಡೆ ಮಾಡಿದೆ.
ಎನ್‌ಡಿಎ ಬಣದ ಬಿಜೆಪಿ ಎರಡು ಹಂತದ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ಮೊದಲ ಪಕ್ಷವಾಗಿದೆ.
ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವಾರು ಪ್ರಮುಖ ನಾಯಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಚೌಧರಿ ಅವರನ್ನು ಮುಂಗೇರ್‌ನ ತಾರಾಪುರದಿಂದ ಕಣಕ್ಕಿಳಿಸಲಾಗಿದ್ದರೆ, ಸಿನ್ಹಾ ಅವರನ್ನು ಲಖಿಸರಾಯ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಜೆಡಿಯುನ ರಾಜೀವ್ ಕುಮಾರ್ ಸಿಂಗ್ 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ತಾರಾಪುರ ಕ್ಷೇತ್ರವನ್ನು ಗೆದ್ದಿದ್ದರು.
71 ಅಭ್ಯರ್ಥಿಗಳಲ್ಲಿ ಒಂಬತ್ತು ಮಹಿಳೆಯರಿದ್ದು, ಬಿಹಾರ ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರ ಹೆಸರು ಪಟ್ಟಿಯಲ್ಲಿ ಇಲ್ಲ. ಯಾದವ್ ಅವರ ಬದಲಿಗೆ ಪಾಟ್ನಾ ಸಾಹೇಬ್‌ನ ಹೊಸ ಅಭ್ಯರ್ಥಿ ರತ್ನೇಶ್ ಕುಶ್ವಾಹ ಅವರನ್ನು ಕಣಕ್ಕಿಳಿಸಲಾಗಿದೆ.
ವಿಧಾನ ಪರಿಷತ್ ಸದಸ್ಯರಾಗಿರುವ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರನ್ನು ಸಹ ಕಣಕ್ಕಿಳಿಸಲಾಗಿದೆ. ಅವರು ತಮ್ಮ ಸ್ಥಳೀಯ ಜಿಲ್ಲೆಯಾದ ಸಿವಾನ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
Advertisement