
ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಬಾರಿ ಬಿಜೆಪಿ ಹಾಗೂ ಎನ್ ಡಿಎ ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ನಿತೀಶ್ ಕುಮಾರ್ ಆಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಹವಣಿಸುತ್ತಿದೆ.
ಕಣದಿಂದ ಹಿಂದೆ ಸರಿದ ಪ್ರಶಾಂತ್ ಕಿಶೋರ್:
ಈ ಮಧ್ಯೆ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬುಧವಾರ ಘೋಷಿಸಿದ್ದಾರೆ. ಪಕ್ಷದ ಒಳಿತಿಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪಕ್ಷ ಗೆದ್ದರೆ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ
ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ರಾಜಕೀಯ ತಂತ್ರಜ್ಞ, ಪ್ರಶಾಂತ್ ಕಿಶೋರ್, ಜನ್ ಸೂರಾಜ್‌ಗೆ "150 ಸೀಟುಗಳಿಗಿಂತ ಕಡಿಮೆ ಬಂದರೆ ಸೋಲು ಎಂದು ಪರಿಗಣಿಸಲಾಗುತ್ತದೆ. ಬಿಹಾರ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷ ಗೆದ್ದರೆ ಅದು ರಾಷ್ಟ್ರವ್ಯಾಪಿ ಪರಿಣಾಮ ಬೀರಲಿದ್ದು, ರಾಷ್ಟ್ರ ರಾಜಕಾರಣದ ದಿಕ್ಸೂಚಿ ಬೇರೆ ದಿಕ್ಕಿನತ್ತ ಸಾಗಲಿದೆ ಎಂದು ಅವರು ಹೇಳಿದರು.
ತೇಜಸ್ವಿ ಯಾದವ್ ಗೆ ಅನುಕೂಲ:
ಬಿಹಾರ ಚುನಾವಣೆಯು ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ನಾನು ಚುನಾವಣೆಗೆ ಸ್ಪರ್ಧಿಸಬಾರದು ಎಂದು ಪಕ್ಷವು ನಿರ್ಧರಿಸಿದೆ. ಹೀಗಾಗಿ ತೇಜಸ್ವಿ ಯಾದವ್ ವಿರುದ್ಧ ಪಕ್ಷವು ರಾಘೋಪುರದಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಘೋಷಿಸಿದೆ. ಇದು ಪಕ್ಷದ ಹಿತಾಸಕ್ತಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಅವರು ತಿಳಿಸಿದರು.
ಪಕ್ಷದ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, ನಾವು ನಿರಾಯಸವಾಗಿ ಗೆಲ್ಲುತ್ತೇವೆ ಇಲ್ಲವೇ ಸೋಲನ್ನು ಪಡೆಯುತ್ತೇವೆ ಎಂದು ಖಚಿತವಾಗಿ ಹೇಳಬಲ್ಲೆ. ನಾನು 10 ಕ್ಕಿಂತ ಕಡಿಮೆ ಅಥವಾ 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ನಿರೀಕ್ಷಿಸುತ್ತೇನೆ ಎಂದು ಹೇಳಿದರು.
ಚುನಾವಣೆಯಲ್ಲಿ ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದರೆ ಜನ ಸೂರಜ್ ಪಕ್ಷ ಎನ್‌ಡಿಎ ಅಥವಾ ಇಂಡಿಯಾ ಬಣವನ್ನು ಬೆಂಬಲಿಸಲು ಬಯಸುತ್ತದೆಯೇ ಎಂಬ ಪ್ರಶ್ನೆ ಕುರಿತು ಮಾತನಾಡಿದ ಅವರು, ಈ ರೀತಿ ಫಲಿತಾಂಶ ಸಾಮಾನ್ಯವಾಗಿ ಬರಲ್ಲ. ನಮಗೆ 150 ಕ್ಕಿಂತ ಕಡಿಮೆ ಸ್ಥಾನ ಬಂದರೆ ಬಿಹಾರದಲ್ಲಿ ಸೋಲು ಅಂತಾ ಪರಿಗಣಿಸುತ್ತೇವೆ. ಜನರು ನಮ್ಮಲ್ಲಿ ಸಾಕಷ್ಟು ವಿಶ್ವಾಸವನ್ನು ತೋರಿಸಿಲ್ಲ ಎಂದರ್ಥವಾಗಲಿದೆ. ಪಕ್ಷ ಸಂಘಟನೆಯನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಎನ್‌ಡಿಎಗೆ ಸೋಲು ಖಚಿತ: ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎಗೆ ಸೋಲು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ಸ್ಥಾನಗಳನ್ನು ಮತ್ತು ಅಭ್ಯರ್ಥಿಗಳನ್ನು ಅಖೈರುಗೊಳಿಸುವಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. 243 ಬಲದ ವಿಧಾನಸಭೆಯಲ್ಲಿ ಜೆಡಿ-ಯು "25 ಸ್ಥಾನಗಳನ್ನು" ಗೆಲ್ಲಲು ಹೆಣಗಾಡಲಿದೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಪ್ರಶಾಂತ್ ಕಿಶೋರ್, "ಎನ್‌ಡಿಎ ಖಂಡಿತವಾಗಿಯೂ ಅಧಿಕಾರದಿಂದ ಹೊರಹೋಗುತ್ತಿದೆ ಮತ್ತು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲ್ಲ ಎಂದು ಭವಿಷ್ಯ ನುಡಿದರು
Advertisement