
ಮೇದಿನಿಪುರ್: ಜನರ ಗುಂಪೊಂದು ಕಾಡಾನೆಯೊಂದರ ಬಾಲ ಎಳೆದು, ಅದರ ಕಿವಿ ಮೇಲೆ ಕಲ್ಲು ಎಸೆದು ಕಿರುಕುಳ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಚೋದನೆ ವರ್ತನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದ ಮೇದಿನಿಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಅರಣ್ಯ ಪ್ರದೇಶದ ಸಮೀಪವಿರುವ ಹಳ್ಳಿಯೊಂದಕ್ಕೆ ನುಗ್ಗಿದ ಆನೆಗಳ ಹಿಂಡಿನ ಹತ್ತಿರ ಜನರು ಗುಂಪು ಗುಂಪಾಗಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಯುವಕ ಮೋಜಿಗಾಗಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್, ಲೈಕ್ ಗಾಗಿ ಹಿಂದಿನಿಂದ ಆನೆಯ ಬಳಿಗೆ ಬಂದು ಅದರ ಬಾಲವನ್ನು ಎಳೆಯುತ್ತಾನೆ.
ಗಾಬರಿಗೊಂಡ ಕಾಡಾನೆ ದೂರ ಸರಿಯಲು ಪ್ರಯತ್ನಿಸುತ್ತಿರುವಾಗ ಆ ಯುವಕ ನಗುತ್ತಾ ವಾಪಸ್ಸಾಗುವುದು ವಿಡಿಯೋದಲ್ಲಿದೆ. ಬೇರೆಯವರು ಆನೆ ಕಿವಿ ಮೇಲೆ ಕಲ್ಲುಗಳನ್ನು ಕೂಡಾ ಎಸೆಯುತ್ತಾರೆ.
ಇಲ್ಲಿ ನಿಜವಾದ ವನ್ಯಪ್ರಾಣಿ ಯಾರು? ಅಥವಾ ಮನುಷ್ಯರು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆಯೇ? ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಜನರ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಡು ಪ್ರಾಣಿಗಳಿಗೆ ಕಿರುಕುಳ ನೀಡುವುದು ಅಥವಾ ಪ್ರಚೋದಿಸುವುದು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ಆನೆಗೆ ಹೀಗೆ ಕಿರುಕುಳ ನೀಡಿದವರಿಗೆ ಕಟ್ಟುನಿಟ್ಟಿನ ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಬಳಕೆದಾರರು ಒತ್ತಾಯಿಸುತ್ತಿದ್ದಾರೆ.
Advertisement