
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಮೋದಿ ಭಯಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಅಮೆರಿಕದ ನಾಯಕ ನಿರ್ಧರಿಸಲು ಮತ್ತು ಘೋಷಿಸಲು ಮೋದಿ ಏಕೆ ಬಿಡಬೇಕು. ಪದೇ ಪದೇ ನಿಂದಿಸುತ್ತಿದ್ದರೂ ಮೋದಿ ಅವರು ಧನ್ಯವಾದಗಳನ್ನು ಹೇಳುತ್ತಲೇ ಇರುತ್ತಾರೆ ಎಂದರು.
ನಿನ್ನೆ ವಾಷಿಂಗ್ಟನ್ ನಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ತಮ್ಮ ಸ್ನೇಹಿತ ಭಾರತ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ಉಕ್ರೇನ್ ಆಕ್ರಮಣದ ಬಗ್ಗೆ ರಷ್ಯಾ ಮೇಲೆ ಒತ್ತಡವನ್ನು ಹೆಚ್ಚಿಸಲು ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಮೋದಿಗೆ ಟ್ರಂಪ್ ಕಂಡರೆ ಭಯ
ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುತ್ತಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ನಿರ್ಧರಿಸಲು ಮತ್ತು ಘೋಷಿಸಲು ಅವರೇಕೆ ಅನುವು ಮಾಡಿ ಕೊಡುತ್ತಾರೆ. ಪದೇ ಪದೇ ನಿಂದನೆಗಳ ಹೊರತಾಗಿಯೂ ಅವರ ಜೊತೆ ಮಾತನಾಡಿ ಅಬಿನಂದನೆ ಹೇಳುತ್ತಿರುತ್ತಾರೆ. ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ಶರ್ಮ್ ಎಲ್-ಶೇಖ್ ಶೃಂಗಸಭೆಗೆ ಹೋಗಲಿಲ್ಲ . ಆಪರೇಷನ್ ಸಿಂದೂರ್ ನಲ್ಲಿ ವಿರೋಧಿಸಲಿಲ್ಲ ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಗೆ ಹೆಚ್ಚುವರಿಯಾಗಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ-ಪ್ರಭಾರ ಸಂವಹನ ಜೈರಾಮ್ ರಮೇಶ್ ಕೂಡ ಈ ವಿಷಯದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಭಾರತೀಯ ಕಾಲಮಾನ ಮೇ 10 ಸಂಜೆ 5:37 ಕ್ಕೆ, ಭಾರತ ಆಪರೇಷನ್ ಸಿಂದೂರ್ ನ್ನು ಸ್ಥಗಿತಗೊಳಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮೊದಲು ಘೋಷಿಸಿದರು. ತರುವಾಯ, ಅಧ್ಯಕ್ಷ ಟ್ರಂಪ್ 5 ವಿಭಿನ್ನ ದೇಶಗಳಲ್ಲಿ 51 ಬಾರಿ ಸುಂಕ ಮತ್ತು ವ್ಯಾಪಾರವನ್ನು ಒತ್ತಡದ ಅಸ್ತ್ರವಾಗಿ ಬಳಸಿಕೊಂಡು ಆಪರೇಷನ್ ಸಿಂದೂರ್ ನ್ನು ನಿಲ್ಲಿಸಲು ಮಧ್ಯಪ್ರವೇಶಿಸಿರುವುದಾಗಿ ಹೇಳಿಕೊಂಡರೂ ನಮ್ಮ ಪ್ರಧಾನಿ ಮೌನವಾಗಿದ್ದರು ಎಂದು ಟೀಕಿಸಿದ್ದಾರೆ.
ಈಗ ಅಧ್ಯಕ್ಷ ಟ್ರಂಪ್ ನಿನ್ನೆ ಶ್ರೀ ಮೋದಿ ಭಾರತ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಘೋಷಿಸಿದ್ದಾರೆ. ಮೋದಿ ಪ್ರಮುಖ ನಿರ್ಧಾರಗಳನ್ನು ಅಮೆರಿಕಕ್ಕೆ ಹೊರಗುತ್ತಿಗೆ ನೀಡಿದಂತೆ ಕಾಣುತ್ತದೆ. 56 ಇಂಚಿನ ಎದೆ ಈಗ ಕುಗ್ಗಿದೆ ಎಂದು ಟೀಕಿಸಿದ್ದಾರೆ.
Advertisement