
ಚೆನ್ನೈ: ಖ್ಯಾತ ತಮಿಳು ನಟ ಹಾಗೂ ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.
ಟಿವಿಕೆ ಮಾನ್ಯತೆ ರದ್ದು ಕೋರಿ ಸಿ ಸೆಲ್ವಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಚುನಾವಣಾ ಆಯೋಗದ ವಕೀಲ ನಿರಂಜನ್ ರಾಜಗೋಪಾಲ್ ಅವರು ಮುಖ್ಯ ನ್ಯಾಯಮೂರ್ತಿ ಎಂ.ಎಂ. ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರ ಪೀಠಕ್ಕೆ ಈ ವಿಷಯ ತಿಳಿಸಿದರು.
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ಆಯೋಜಿಸಲಾಗಿದ್ದ ಪಕ್ಷದ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಟಿವಿಕೆಯ ಮಾನ್ಯತೆ ರದ್ದುಗೊಳಿಸುವಂತೆ ಕೋರಲಾಗಿತ್ತು.
ಟಿವಿಕೆಯನ್ನು ಮಾನ್ಯತೆ ರದ್ದುಗೊಳಿಸುವ ಪ್ರಾರ್ಥನೆಗೆ ಸಂಬಂಧಿಸಿದಂತೆ, ಇಸಿ ಪರ ವಕೀಲರ ನಿರಂಜನ್ ರಾಜಗೋಪಾಲ್ ಅವರು, ಈ ಪಕ್ಷವು ಮಾನ್ಯತೆ ಪಡೆದ ಪಕ್ಷವಲ್ಲ. ಆದ್ದರಿಂದ ಈ ಅರ್ಜಿಗೆ ಯಾವುದೇ ಮಹತ್ವ ಇಲ್ಲ ಎಂದು ಹೇಳಿದರು.
ಮೂಲತಃ ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಸಲ್ಲಿಸಲಾಗಿತ್ತು. ಆದರೆ ಅರ್ಜಿಯಲ್ಲಿ ಮೊದಲ ಪ್ರತಿವಾದಿ ಮುಖ್ಯ ಚುನಾವಣಾ ಆಯುಕ್ತರು(ಸಿಇಸಿ) ಆಗಿದ್ದರಿಂದ ಅದನ್ನು ಮದ್ರಾಸ್ ಹೈಕೋರ್ಟ್ ನ ಮೊದಲ ಪೀಠದ ಮುಂದೆ ಪಟ್ಟಿ ಮಾಡಲಾಯಿತು.
Advertisement