
ನವದೆಹಲಿ: ಈ ಹಬ್ಬದ ಸಮಯದಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಒಂದು ವಿಶಿಷ್ಟ ಕೊಡುಗೆಯನ್ನು ಘೋಷಿಸಿದ್ದು, ಇತ್ತೀಚೆಗೆ ಬಿಡುಗಡೆ ಮಾಡಲಾದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಅನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಬಹುದು.
ಬೆಳಕಿನ ಹಬ್ಬ ದೀಪಾವಳಿಯ ಸಮಯದಲ್ಲಿ ಪ್ರಯಾಣಿಕರಿಗೆ ಸುಲಭ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲು, ಈ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಒಂದು ಉತ್ತಮ ಉಡುಗೊರೆಯಾಗಿದೆ. ಇದು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ವರ್ಷಪೂರ್ತಿ ತೊಂದರೆ-ಮುಕ್ತ ಪ್ರಯಾಣವನ್ನು ಸಕ್ರಿಯಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಮಾರ್ಗಯಾತ್ರೆ ಆ್ಯಪ್ ಮೂಲಕ ವಾರ್ಷಿಕ ಪಾಸ್ ಅನ್ನು ಉಡುಗೊರೆಯಾಗಿ ನೀಡಬಹುದು. ಆ್ಯಪ್ ನಲ್ಲಿರುವ 'Add Pass'(ಪಾಸ್ ಸೇರಿಸಿ) ಆಯ್ಕೆಯನ್ನು ಕ್ಲಿಕ್ ಮಾಡು ಮೂಲಕ ಬಳಕೆದಾರರು ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಅನ್ನು ಉಡುಗೊರೆಯಾಗಿ ನೀಡಲು ಬಯಸುವ ವ್ಯಕ್ತಿಯ ವಾಹನ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ಸೇರಿಸಬೇಕು.
ಸರಳ OTP ಪರಿಶೀಲನೆಯ ನಂತರ, ಆ ವಾಹನಕ್ಕೆ ಲಗತ್ತಿಸಲಾದ ಫಾಸ್ಟ್‌ಟ್ಯಾಗ್‌ನಲ್ಲಿ ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.
ಏನಿದು ವಾರ್ಷಿಕ ಪಾಸ್?
ಈ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಸುಗಮ ಮತ್ತು ಕಡಿಮೆ ವೆಚ್ಚದ ಪ್ರಯಾಣ ಆಯ್ಕೆಯನ್ನು ಒದಗಿಸುತ್ತದೆ ಮತ್ತು ಭಾರತದಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಅನ್ವಯಿಸುತ್ತದೆ.
ಈ ವಾರ್ಷಿಕ ಪಾಸ್, ಒಂದು-ಬಾರಿ 3000 ರೂ. ಶುಲ್ಕ ಪಾವತಿಯ ಮೂಲಕ ಫಾಸ್ಟ್‌ಟ್ಯಾಗ್ ಅನ್ನು ಆಗಾಗ್ಗೆ ರೀಚಾರ್ಜ್ ಮಾಡುವ ಅಗತ್ಯವನ್ನು ನಿವಾರಿಸುತ್ತದೆ. ಒಂದು ವರ್ಷದ ಸಿಂಧುತ್ವ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ಈ ಪಾಸ್ ಅನ್ವಯಿಸುತ್ತದೆ.
ಆಗಸ್ಟ್ 15, 2025 ರಂದು ಬಿಡುಗಡೆಯಾದ ಕೇವಲ ಎರಡು ತಿಂಗಳೊಳಗೆ ಈ ವಾರ್ಷಿಕ ಪಾಸ್ 25 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ತಲುಪಿದೆ ಮತ್ತು ಸುಮಾರು 5.67 ಕೋಟಿ ವಹಿವಾಟುಗಳನ್ನು ದಾಖಲಿಸಿದೆ.
Advertisement