
ಲಖನೌ: "ಪಾಕಿಸ್ತಾನದ ಪ್ರತಿಯೊಂದು ಪ್ರದೇಶವೂ ನಮ್ಮ ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯಲ್ಲಿದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಪರೇಷನ್ ಸಿಂಧೂರ್ ಬರೀ "ಟ್ರೈಲರ್" ಅಷ್ಟೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಇಂದು ಲಖನೌನ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಿಸಿದ ಮೊದಲ ಬ್ಯಾಚ್ ನ ಬ್ರಹ್ಮೋಸ್ ಕ್ಷಿಪಣಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ರಾಜನಾಥ್ ಸಿಂಗ್ ಅವರು ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ರಾಜನಾಥ್ ಸಿಂಗ್ ಅವರು, ಬ್ರಹ್ಮೋಸ್ ಭಾರತದ ಸಶಸ್ತ್ರ ಪಡೆಗಳ ಪ್ರಮುಖ ಆಧಾರಸ್ತಂಭವಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ, ಭಾರತ ತನ್ನ ಶತ್ರುಗಳನ್ನು ಬಿಡುವುದಿಲ್ಲ ಎಂಬದನ್ನು ಸಾಬೀತುಪಡಿಸಿದೆ ಎಂದರು.
ಭಾರತದ ಸಶಸ್ತ್ರ ಪಡೆಗಳ ನಿಖರತೆ ಮತ್ತು ಸನ್ನದ್ಧತೆಯನ್ನು ಶ್ಲಾಘಿಸಿದ ರಾಜನಾಥ್ ಸಿಂಗ್ "ನಮ್ಮ ವಿರೋಧಿಗಳು ಇನ್ನು ಮುಂದೆ ಬ್ರಹ್ಮೋಸ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ ಪ್ರತಿಯೊಂದು ಪ್ರದೇಶವು ನಮ್ಮ ಬ್ರಹ್ಮೋಸ್ ನ ವ್ಯಾಪ್ತಿಯಲ್ಲಿದೆ" ಎಂದು ಹೇಳಿದ್ದಾರೆ.
"ಆಪರೇಷನ್ ಸಿಂಧೂರ್ ಕೇವಲ ಟ್ರೇಲರ್ ಮಾತ್ರ ಎಂದು ಪಾಕಿಸ್ತಾನ ಖಡಕ್ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರದ ಗೆಲುವು ಒಂದು ಸಣ್ಣ ಘಟನೆಯಲ್ಲ ಎಂದು ಸಾಬೀತುಪಡಿಸಿದೆ. ಅಲ್ಲದೆ ಗೆಲುವು ನಮ್ಮ ಅಭ್ಯಾಸವಾಗಿದೆ ಎಂದರು.
"ಬ್ರಹ್ಮೋಸ್ ಸಶಸ್ತ್ರ ಪಡೆಗಳ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಪ್ರತಿ ವರ್ಷ ಸುಮಾರು 100 ಕ್ಷಿಪಣಿಗಳನ್ನು ಇಲ್ಲಿಂದ ಉಡಾಯಿಸಲಾಗುವುದು. ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಕ್ಷಿಪಣಿಗಳನ್ನು ಪೂರೈಸಲಾಗುವುದು. ಈ ಬ್ರಹ್ಮೋಸ್ ಸೌಲಭ್ಯವನ್ನು ಸುಮಾರು 200 ಎಕರೆಗಳಲ್ಲಿ ನಿರ್ಮಿಸಲಾಗಿದೆ. ಇದರ ಒಟ್ಟು ವೆಚ್ಚ ಸುಮಾರು 380 ಕೋಟಿ ರೂ.ಗಳಾಗಿದ್ದು, ಇದು ನೂರಾರು ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ" ಎಂದು ರಾಜನಾಥ್ ಸಿಂಗ್ ಹೇಳಿದರು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಸಚಿವ ನಂದ ಗೋಪಾಲ್ ಗುಪ್ತಾ ನಂದಿ ಮತ್ತು ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement