

ನವದೆಹಲಿ: ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯದ ಜನತೆ ಮುಂದೆ ಹುಸಿಬಾಂಬ್ ಗಳನ್ನು ಹಾಕುವುದನ್ನು ಬಿಟ್ಟು ಜನರ ಸಮಸ್ಯೆಗಳು, ಕೆಲಸಗಳತ್ತ ಗಮನಹರಿಸಿ, ರಾಜ್ಯದ ಜನರನ್ನು ಮರುಳು ಮಾಡಲು ನೋಡಬೇಡಿ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಕಾಂಗ್ರೆಸ್ ನಾಯಕರನ್ನು ಕೇಳಿಕೊಂಡಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ವಿಪರೀತ ಮಳೆ ಸುರಿದು ಜನರು ಸಂಕಷ್ಟದಲ್ಲಿದ್ದಾರೆ. ಬೆಳೆ ಹಾನಿಗೀಡಾಗಿವೆ. ಜನರಿಗೆ ರಸ್ತೆಗಳಲ್ಲಿ ಸರಿಯಾಗಿ ಸಂಚಾರ ಮಾಡಲಾಗುತ್ತಿಲ್ಲ, ಇಂತಹ ವಿಷಯಗಳ ಬಗ್ಗೆ ಗಮನಹರಿಸುವುದು ಬಿಟ್ಟು ಸಿಎಂ ಬದಲಾವಣೆ ಬಗ್ಗೆ ಪದೇ ಪದೇ ಏಕೆ ಹೇಳಿಕೆ ಕೊಡುತ್ತೀರಿ ಎಂದು ಕೇಳಿದರು.
ಸತೀಶ್ ಜಾರಕಿಹೊಳಿಯವರನ್ನು ಏಕೆ ಮಧ್ಯ ತರುತ್ತೀರಿ?
ಡಿ ಕೆ ಶಿವಕುಮಾರ್ ಅವರು ಪಕ್ಷಕ್ಕೆ ಏನು ಕೊಟ್ಟಿದ್ದಾರೆ, ಅವರಿಗೆ ಯಾವ ರೀತಿ ಸ್ಥಾನ ಮಾನ ಕೊಡಬೇಕೆಂಬುದು ಪಕ್ಷದ ವಿಚಾರ, ಅನವಶ್ಯಕವಾಗಿ ಸತೀಶ್ ಜಾರಕಿಹೊಳಿಯವರನ್ನು ತರುವುದೇಕೆ, 2028ರವರೆಗೆ ನಾನು ಯಾವುದೇ ಹುದ್ದೆ ಬಯಸುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಇಷ್ಟೆಲ್ಲ ಇರುವಾಗ ತಮ್ಮ ತಂದೆಯವರ ಕೆಲಸ, ಗೌರವಗಳನ್ನು ಕಾಪಾಡಿಕೊಂಡು ಹೋಗುವುದು ಬಿಟ್ಟು ಯತೀಂದ್ರ ಅವರಿಗೆ ಸಿಎಂ ಬದಲಾವಣೆ, ಕಾಂಗ್ರೆಸ್ ನ ಮುಂದಿನ ಸಿಎಂ ಬಗ್ಗೆ ಮಾತನಾಡುವ ಕೆಲಸ ಏಕೆ ಎಂದು ಸೋಮಣ್ಣ ಕೇಳಿದರು.
ಉತ್ತಮ ಆಡಳಿತ ಕೊಡಿ
ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ, ಅವರಿಗೆ ಅಪಾರ ಅನುಭವವಿದೆ, ಅದನ್ನು ರಾಜ್ಯದ ಜನತೆಯ ಅಭಿವೃದ್ಧಿಗೆ ಬಳಸಿ ಉತ್ತಮ ಆಡಳಿತ ನೀಡಿ ಹೆಸರು ಗಳಿಸಿ ಎಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಪಕ್ಷ ಇಂದು ಗೊಂದಲದ ಗೂಡಾಗಿದೆ. ಹೇಳುವವರು, ಕೇಳುವವರು ಇಲ್ಲದ ಪರಿಸ್ಥಿತಿ ಬಂದಿದೆ. ಯಾರು ಅಪ್ಪ, ಯಾರು ಅಮ್ಮ ಎಂದು ಗೊತ್ತಿಲ್ಲದ ಅವ್ಯವಸ್ಥೆಯ ಆಗರ ಕಾಂಗ್ರೆಸ್ ಆಗಿದೆ. ಯಾರು ಯತೀಂದ್ರ, ಯಾರು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಇವರಿಗೇನು ಹೇಳುವವರು ಕೇಳುವವರು ಯಾರು ಇಲ್ಲವಾ? ಮಾತೆತ್ತಿದರೆ ನಮ್ಮ ಹೈಕಮಾಂಡ್ ಎನ್ನುವವರು ಇಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿರುವಾಗ ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಯಾಮಾರಿಸುವ ಪಾಪದ ಕೆಲಸ ಮಾಡುತ್ತಿದ್ದಾರೆ, ಇದು ಒಳ್ಳೆಯದಲ್ಲ ಎಂದರು.
ನಮಗಿರುವ ಮಾಹಿತಿ ಪ್ರಕಾರ ಎಲ್ಲೋ ಒಂದು ಕಡೆ ಸಿದ್ದರಾಮಯ್ಯನವರು ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಡುತ್ತಾರೆ ಎಂದು ಜನ ಮಾತನಾಡುವುದನ್ನು ನಾವು ನೀವು ಕೇಳಿದ್ದೇವೆ. ಇದೆಲ್ಲದರ ಮಧ್ಯೆ ಹುಸಿಬಾಂಬ್ ಗಳನ್ನು ಹಾಕಿಕೊಂಡು ರಾಜ್ಯದ ಜನತೆಯನ್ನು ಕತ್ತಲೆ ಕೋಣೆಯಲ್ಲಿ ಇರಿಸುವ ಕೆಲಸ ಬಿಟ್ಟುಬಿಡಿ ಎಂದರು.
Advertisement