

ನವದೆಹಲಿ: ಕಳೆದ ಮೇ ತಿಂಗಳಲ್ಲಿ ನಿಧನರಾದ ಖ್ಯಾತ ಖಗೋಳ ತಜ್ಞ, ವಿಜ್ಞಾನ ಸಂವಹನಕಾರ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಜಯಂತ್ ನಾರ್ಲಿಕರ್ ಅವರನ್ನು ಶನಿವಾರ ದೇಶದ ಅತ್ಯುನ್ನತ ವಿಜ್ಞಾನ ಪ್ರಶಸ್ತಿಯಾದ ವಿಜ್ಞಾನ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ನಾರ್ಲಿಕರ್ ಅವರು `ಬಿಗ್ ಬ್ಯಾಂಗ್’ಸಿದ್ಧಾಂತಕ್ಕೆ ಪರ್ಯಾಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ನಾರ್ಲಿಕರ್ ಅವರು ಕಳೆದ ಮೇ 20 ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.
ಕೇಂದ್ರ ಸರ್ಕಾರ ಇಂದು 2025ನೇ ಸಾಲಿನ ಎಂಟು ವಿಜ್ಞಾನ ಶ್ರೀ ಪ್ರಶಸ್ತಿಗಳನ್ನು ಘೋಷಿಸಿದ್ದು, ಜ್ಞಾನೇಂದ್ರ ಪ್ರತಾಪ್ ಸಿಂಗ್(ಕೃಷಿ ವಿಜ್ಞಾನ), ಯೂಸುಫ್ ಮೊಹಮ್ಮದ್ ಶೇಖ್(ಪರಮಾಣು ಶಕ್ತಿ), ಕೆ ತಂಗರಾಜ್(ಜೈವಿಕ ವಿಜ್ಞಾನ), ಪ್ರದೀಪ್ ಥಲಪ್ಪಿಲ್(ರಸಾಯನಶಾಸ್ತ್ರ), ಅನಿರುದ್ಧ ಭಾಲಚಂದ್ರ ಪಂಡಿತ್(ಎಂಜಿನಿಯರಿಂಗ್ ವಿಜ್ಞಾನ), ಎಸ್ ವೆಂಕಟ ಮೋಹನ್(ಪರಿಸರ ವಿಜ್ಞಾನ), ಮಹಾನ್ ಎಂಜೆ(ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ) ಮತ್ತು ಜಯನ್ ಎನ್(ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ) ಅವರು ವಿಜ್ಞಾನ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಲ್ಯಾವೆಂಡರ್ ಮಿಷನ್ ಅನ್ನು ಮುನ್ನಡೆಸಿದ ಸಿಎಸ್ಐಆರ್ ಅರೋಮಾ ಮಿಷನ್ ತಂಡವನ್ನು ವಿಜ್ಞಾನ ತಂಡ ಪ್ರಶಸ್ತಿಗೆ ಹೆಸರಿಸಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ರಾಷ್ಟ್ರೀಯ ಗೌರವವೆಂದು ಪರಿಗಣಿಸಲಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು 2023ರಲ್ಲಿ ಆರಂಭಿಸಲಾಯಿತು ಮತ್ತು ಕಳೆದ ವರ್ಷ ಆಗಸ್ಟ್ 22 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನದ ಮುನ್ನಾದಿನದಂದು ಮೊದಲ ಪ್ರಶಸ್ತಿಗಳನ್ನು ನೀಡಲಾಯಿತು.
Advertisement