

ಬುಲ್ಧಾನ: ಕ್ಷುಲಕ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆದು ಪತ್ನಿ ತವರು ಮನೆ ಸೇರಿದ ನಂತರ ಪಾಪಿ ತಂದೆಯೊಬ್ಬ ತನ್ನ ಎರಡು ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ಡು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ. ಬರ್ಬರ ಕೃತ್ಯದ ನಂತರ ಕಟುಕ ತಂದೆ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯನ್ನು ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ಎಂದು ಗುರುತಿಸಲಾಗಿದೆ. ಚವಾಣ್ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಪ್ರಯಾಣಿಸುತ್ತಿದ್ದಾಗ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ತದನಂತರ ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಲು ನಿರ್ಧರಿದ್ದಾಳೆ.
ಆದರೆ ಚವಾಣ್ ತನ್ನ ಹೆಣ್ಣುಮಕ್ಕಳೊಂದಿಗೆ ಏಕಾಂಗಿಯಾಗಿ ಪ್ರಯಾಣವನ್ನು ಮುಂದುವರೆಸಿದ್ದು, ಕೋಪದ ಭರದಲ್ಲಿ ತನ್ನ ಅವಳಿ ಹೆಣ್ಣು ಮಕ್ಕಳನ್ನು ಬುಲ್ಧಾನ ಜಿಲ್ಲೆಯ ಅಂಚಾರ್ವಾಡಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಘಟನೆಯ ನಂತರ, ಚವಾಣ್ ನೇರವಾಗಿ ವಾಶಿಮ್ ಪೊಲೀಸ್ ಠಾಣೆಗೆ ತೆರಳಿದ್ದು, ಅಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನ ತಪ್ಪೊಪ್ಪಿಗೆ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮಕ್ಕಳ ಶವಗಳನ್ನು ಹೊರತೆಗೆದಿದೆ. ಶವಗಳು ಭಾಗಶಃ ಸುಟ್ಟುಹೋಗಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊಲೆ ಮಾಡಿದ ನಂತರ ಚವಾಣ್ ಬೆಂಕಿ ಹಚ್ಚುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ತನಿಖೆಯ ಈ ಅಂಶವನ್ನು ಪೊಲೀಸ್ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಸಾವಿಗೆ ನಿಖರವಾದ ಕಾರಣ ಮತ್ತು ಮರಣೋತ್ತರವಾಗಿ ಬಾಲಕಿಯರನ್ನು ಸುಟ್ಟುಹಾಕಲಾಗಿದೆಯೇ ಎಂದು ನಿರ್ಧರಿಸಲು ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement