

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತ್ತೊಂದು ನಗರದ ಹೆಸರು ಬದಲಾವಣೆಗೆ ಮುಂದಾಗಿದ್ದು, ಲಖಿಂಪುರ ಖೇರಿ ಜಿಲ್ಲೆಯ ಮುಸ್ತಫಾಬಾದ್ ಗ್ರಾಮವನ್ನು 'ಕಬಿರ್ಧಾಮ್' ಎಂದು ಮರುನಾಮಕರಣ ಮಾಡಲು ತಮ್ಮ ಸರ್ಕಾರ ಪ್ರಸ್ತಾವನೆ ಮಂಡಿಸಲಿದೆ ಎಂದು ಸೋಮವಾರ ಹೇಳಿದ್ದಾರೆ.
ಈ ಬದಲಾವಣೆಯು ಸಂತ ಕಬೀರ್ ಅವರೊಂದಿಗೆ ಸಂಬಂಧ ಹೊಂದಿರುವ ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತನ್ನು ಪುನಃಸ್ಥಾಪಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.
"ಸ್ಮೃತಿ ಮಹೋತ್ಸವ ಮೇಳ 2025"ದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಹಿಂದಿನ ಸರ್ಕಾರಗಳು "'ಕಬ್ರಿಸ್ತಾನ್' ಗಡಿ ಗೋಡೆಗಳನ್ನು ನಿರ್ಮಿಸುವುದಕ್ಕೆ" ವ್ಯಯವಾಗುತ್ತಿದ್ದ ಹಣವನ್ನು ನಮ್ಮ ಸರ್ಕಾರ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ತಾಣಗಳನ್ನು ಪುನರುಜ್ಜೀವನಗೊಳಿಸಲು ಖರ್ಚು ಮಾಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಾತ್ಯತೀತತೆಯ ಹೆಸರಿನಲ್ಲಿ ಸ್ಥಳದ ಗುರುತನ್ನು ಬದಲಾಯಿಸುವುದು "ಬೂಟಾಟಿಕೆ" ಎಂದು ಹೇಳಿದರು ಮತ್ತು "ಜಾತ್ಯತೀತತೆಯ ನೆಪದಲ್ಲಿ ಪರಂಪರೆಯನ್ನು ಅಳಿಸಿಹಾಕುವ ಯುಗ ಕೊನೆಗೊಂಡಿದೆ" ಎಂದರು.
ಮುಸ್ಲಿಂ ಜನಸಂಖ್ಯೆ ಇಲ್ಲದಿದ್ದರೂ ಈ ಗ್ರಾಮಕ್ಕೆ ಮುಸ್ತಾಫಾಬಾದ್ ಎಂದು ಹೆಸರಿಟ್ಟಿರುವುದು ಅಚ್ಚರಿ ಮೂಡಿಸಿತು. ಹೀಗಾಗಿ ಗ್ರಾಮದಲ್ಲಿ ಎಷ್ಟು ಜನ ಮುಸ್ಲಿಮರಿದ್ದಾರೆ ಎಂದು ಕೇಳಿದಾಗ, ಯಾವೊಬ್ಬ ಮುಸ್ಲಿಂ ಧರ್ಮದ ವ್ಯಕ್ತಿಯೂ ಇಲ್ಲ ಎನ್ನುವ ಮಾಹಿತಿ ಸಿಕ್ಕಿತು. ಆ ಬಳಿಕ ಗ್ರಾಮದ ಹೆಸರು ಬದಲಾಯಿಸಲು ನಿರ್ಧರಿಸಿದೆ ಮತ್ತು ಗ್ರಾಮದ ಹೆಸರು ಬದಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
Advertisement