

ಗುವಾಹಟಿ: ಹದಿಹರೆಯದ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅರುಣಾಚಲ ಪ್ರದೇಶದ ಐಎಎಸ್ ಅಧಿಕಾರಿ ಟಾಲೋ ಪೋಟಮ್ ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪೊಟಮ್ ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾದ ನಂತರ ಇಂದು ಬೆಳಗ್ಗೆ ಅರುಣಾಚಲ ಪ್ರದೇಶ ಪೊಲೀಸರಿಗೆ ಶರಣಾದರು.
"ಆರೋಪಿ ಐಎಎಸ್ ಅಧಿಕಾರಿಯನ್ನು ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.
19 ವರ್ಷದ ಯುವತಿ ಗೊಮ್ಚು ಯೇಕರ್ ಅವರು ಅಕ್ಟೋಬರ್ 23 ರಂದು ಪಾಪುಮ್ ಪಾರೆ ಜಿಲ್ಲೆಯ ಲೇಖಿ ಗ್ರಾಮದಲ್ಲಿ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಯುವತಿ ತಂದೆ ದೂರು ನೀಡಿದ ನಂತರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ಯೇಕರ್ ಅವರ ಮನೆಯಿಂದ ವಶಪಡಿಸಿಕೊಂಡ ಕೈಬರಹದ ಡೆತ್ ನೋಟ್ ನಲ್ಲಿ ಯುವತಿ ತನ್ನ ಸಾವಿಗೆ ಇಬ್ಬರು ಹಿರಿಯ ಅಧಿಕಾರಿಗಳು ಕಾರಣ ಎಂದು ಆರೋಪಿಸಿದ್ದಾರೆ.
ಯೇಕರ್ ಅವರು ಐಎಎಸ್ ಅಧಿಕಾರಿ ಪೋಟಮ್ ಮತ್ತು ಹಿರಿಯ ಎಂಜಿನಿಯರ್ ಲಿಕ್ವಾಂಗ್ ಲೊವಾಂಗ್ ಅವರು "ಲೈಂಗಿಕವಾಗಿ ಶೋಷಣೆ" ಮಾಡಿದ್ದಾರೆ ಮತ್ತು ದೀರ್ಘಕಾಲದವರೆಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ದೀರ್ಘಕಾಲದ ಅವಮಾನ, ಬಲವಂತ ಮತ್ತು ಬೆದರಿಕೆಗಳಿಂದ ನೊಂದು ಈ ಕಠಿಣ ಹೆಜ್ಜೆ ಇಡುತ್ತಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ.
ರಾಜ್ಯದ ಗ್ರಾಮೀಣ ಕಾಮಗಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಲಿಕ್ವಾಂಗ್ ಲೊವಾಂಗ್, ಯುವತಿ ಆತ್ಮಹತ್ಯೆ ಮಾಡಿಕೊಂಡ ಕೆಲವು ಗಂಟೆಗಳ ನಂತರ ತಿರಾಪ್ ಜಿಲ್ಲೆಯ ತಮ್ಮ ಖೋನ್ಸಾ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು.
ಎಫ್‌ಐಆರ್‌ನಲ್ಲಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ, ಲೈಂಗಿಕ ಶೋಷಣೆ, ಮಾನಸಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ.
ಪೊಲೀಸರಿಗೆ ಶರಣಾಗುವ ಮೊದಲು ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ ಪೊಟಮ್ ಅವರು, ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ನಿರಾಕರಿಸಿದ್ದು, ಮೃತರೊಂದಿಗೆ ತಮಗೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.
Advertisement