

ನವದೆಹಲಿ: ಈಶಾನ್ಯ ರಾಜ್ಯದಲ್ಲಿ ಸೆಮಿಕಂಡಕ್ಟರ್ ಘಟಕದಂತಹ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ಯಾವುದೇ ಪ್ರತಿಭೆ ಇಲ್ಲ ಎಂದು ಕರ್ನಾಟಕ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ತಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ.
ಕರ್ನಾಟಕದ ಸಚಿವರ "ಆಕ್ಷೇಪಾರ್ಹ ಹೇಳಿಕೆ"ಯನ್ನು ಖಂಡಿಸದ ವಿರೋಧ ಪಕ್ಷ ಕಾಂಗ್ರೆಸ್ ಅನ್ನು ಶರ್ಮಾ ಇದೇ ವೇಳೆ ಟೀಕಿಸಿದರು.
"ಪ್ರಿಯಾಂಕ್ ಖರ್ಗೆ ಒಬ್ಬ ಪ್ರಥಮ ದರ್ಜೆ ಮೂರ್ಖ. ಅವರು ಅಸ್ಸಾಮಿ ಯುವಕರನ್ನು ಅವಮಾನಿಸಿದ್ದಾರೆ, ಮತ್ತು ಕಾಂಗ್ರೆಸ್ ಇನ್ನೂ ಪ್ರಿಯಾಂಕ್ ಖರ್ಗೆ ಅವರನ್ನು ಖಂಡಿಸಿಲ್ಲ" ಎಂದು ಅವರು ಹೇಳಿದರು.
ಕರ್ನಾಟಕಕ್ಕೆ ಮೀಸಲಾದ ಹೂಡಿಕೆಗಳನ್ನು ಕೇಂದ್ರ "ಒತ್ತಡ ಹೇರಿ" ಗುಜರಾತ್ ಮತ್ತು ಅಸ್ಸಾಂ ಕಡೆಗೆ ತಿರುಗಿಸಲಾಗುತ್ತಿದೆ ಎಂದು ಖರ್ಗೆ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ, "ಬಹುಶಃ, ಅಸ್ಸಾಂನಲ್ಲಿ ವಿದ್ಯಾವಂತ, ಸಮರ್ಥ ಯುವಕರಿಲ್ಲ ಎಂದು ಅವರು ಹೇಳಿರುವುದರಿಂದ ನಾವು ಅವರ ವಿರುದ್ಧ ಪ್ರಕರಣ ದಾಖಲಿಸಬಹುದು. ಅದು ಅಸ್ಸಾಮಿ ಯುವಕರಿಗೆ ಮಾಡಿದ ಅವಮಾನ. ಆದ್ದರಿಂದ, ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂದು ನಾವು ಪರಿಗಣಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement