

ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು, ಬಹುನಿರೀಕ್ಷಿತ 8ನೇ ಕೇಂದ್ರ ವೇತನ ಆಯೋಗ(ಸಿಪಿಸಿ) ರಚನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶೆ ರಂಜನಾ ಪ್ರಕಾಶ್ ಅವರ ನೇತೃತ್ವದಲ್ಲಿ 8ನೇ ವೇತನ ಆಯೋಗ ರಚನೆಗೆ ಅನುಮೋದನೆ ನೀಡಿದೆ.
8ನೇ ವೇತನ ಆಯೋಗಕ್ಕೆ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷರಾಗಿ, ಐಐಎಂ ಬೆಂಗಳೂರು ಪ್ರೊಫೆಸರ್ ಪುಲಕ್ ಘೋಷ್ ಅವರು ಸದಸ್ಯರಾಗಿ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸದಸ್ಯ-ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಈ ಆಯೋಗವು ರಚನೆಯಾದ 18 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ನೀಡಲಾಗಿದ್ದು, ಆಯೋಗದ ಶಿಫಾರಸು ಆಧರಿಸಿ ಕೇಂದ್ರ ಸರ್ಕಾರ ಸುಮಾರು 50 ಲಕ್ಷ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಹಿತಿ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, “8ನೇ ಕೇಂದ್ರ ವೇತನ ಆಯೋಗ ರಚನೆ ಮಾಡಲಾಗಿದೆ. ಈ ಆಯೋಗವು ಒಬ್ಬ ಅಧ್ಯಕ್ಷರು, ಒಬ್ಬ ಸದಸ್ಯರನ್ನು(ಅರೆಕಾಲಿಕ) ಮತ್ತು ಒಬ್ಬ ಸದಸ್ಯ-ಕಾರ್ಯದರ್ಶಿಯನ್ನು ಒಳಗೊಂಡಿರುತ್ತದೆ” ಎಂದರು.
ಆಯೋಗ ರಚನೆಯಾದ ದಿನಾಂಕದಿಂದ 18 ತಿಂಗಳೊಳಗೆ ತನ್ನ ಶಿಫಾರಸುಗಳನ್ನು ಮಾಡುತ್ತದೆ ಮತ್ತು "ಅಗತ್ಯವಿದ್ದರೆ, ನಿರ್ದಿಷ್ಟ ಶಿಫಾರಸುಗಳು ಅಂತಿಮಗೊಂಡಾಗ, ಮಧ್ಯಂತರ ವರದಿಗಳನ್ನು ಸಲ್ಲಿಸುವ ಅವಕಾಶವೂ ಇದೆ" ಇದೆ ಸಚಿವರು ತಿಳಿಸಿದರು.
"ಅನುಷ್ಠಾನದ ನಿರ್ದಿಷ್ಟ ದಿನಾಂಕವನ್ನು ಮಧ್ಯಂತರ ವರದಿ ಬಂದ ನಂತರ ನಿರ್ಧರಿಸಲಾಗುತ್ತದೆ. ಆದರೆ, ಬಹುತೇಕ ಜನವರಿ 1, 2026 ರಿಂದ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬಹುದು" ಎಂದು ಸಚಿವರು ಹೇಳಿದ್ದಾರೆ.
Advertisement