

ರಾಂಚಿ: ಸೋಮವಾರ ಮತ್ತು ಮಂಗಳವಾರ ಜಾರ್ಖಂಡ್‌ನಾದ್ಯಂತ ನಡೆದ ಛತ್ ಪೂಜೆ ಆಚರಣೆಯ ಸಮಯದಲ್ಲಿ ಕನಿಷ್ಠ 15 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹೆಚ್ಚಿನ ಮಂದಿ ಕೊಳಗಳು ಮತ್ತು ನದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಅಥವಾ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿನ ಘಟನೆಯೊಂದರಲ್ಲಿ, ಹಜಾರಿಬಾಗ್‌ನ ಕಟ್ಕಮ್‌ಸಾಂಡಿಯ ಶಹಪುರ್ ಪಂಚಾಯತ್ ವ್ಯಾಪ್ತಿಯ ಝಾರ್ದಗ್ ಗ್ರಾಮದ ಕೊಳದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಹುಡುಗಿಯರು ಮುಳುಗಿ ಸಾವನ್ನಪ್ಪಿದ್ದಾರೆ. ಛತ್ ಪೂಜೆಯ ನಂತರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.
ಸ್ಥಳೀಯರ ಪ್ರಕಾರ, ಛತ್ ಪೂಜೆಯ ನಂತರ ಹುಡುಗಿಯರು ಬಟ್ಟೆ ತೊಳೆಯಲು ಹತ್ತಿರದ ಕೊಳಕ್ಕೆ ಹೋಗಿದ್ದರು. ಬಟ್ಟೆ ತೊಳೆಯುವಾಗ, ಹುಡುಗಿಯರಲ್ಲಿ ಒಬ್ಬರು ಕೊಳಕ್ಕೆ ಬಿದ್ದು ಆಕೆಯನ್ನು ಉಳಿಸಲು ಪ್ರಯತ್ನದಲ್ಲಿ ಒಬ್ಬೊಬ್ಬರಾಗಿ ನಾಲ್ವರು ಹುಡುಗಿಯರು ಆಳವಾದ ಕೊಳಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಿಂಕಿ ಕುಮಾರಿ (16), ಪೂಜಾ ಕುಮಾರಿ (20), ಸಾಕ್ಷಿ ಕುಮಾರ್ (16), ಮತ್ತು ರಿಯಾ ಕುಮಾರಿ (14) ಎಂದು ಗುರುತಿಸಲಾಗಿದೆ. ಸೋಮವಾರ ಐದು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಿಂದಾಗಿ ಹಬ್ಬದ ಸಮಯದಲ್ಲಿ ನೀರುಪಾಲಾದವರ ಸಂಖ್ಯೆ 15ಕ್ಕೆ ಏರಿದೆ. ಪ್ರತ್ಯೇಕ ಘಟನೆಗಳಲ್ಲಿ ಒಬ್ಬ ಅಪ್ರಾಪ್ತ ಬಾಲಕ ಮತ್ತು ಇಬ್ಬರು ಪುರುಷರು ಸೇರಿದಂತೆ ಹಲವಾರು ಮಂದಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಹಜಾರಿಬಾಗ್‌ನ ಕೆರೇದಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲಾ ಎಂಬಲ್ಲಿನ ಗ್ರಾಮದ ಕೊಳದಲ್ಲಿ ಗುಂಗುನ್ ಕುಮಾರಿ (11) ಮತ್ತು ರೂಪಾ ತಿವಾರಿ (12) ಸಾವನ್ನಪ್ಪಿದ್ದರೆ ಡ್ಯಾನ್ರೋ ನದಿಯಲ್ಲಿ ಸ್ನಾನ ಮಾಡುವಾಗ 13 ವರ್ಷದ ರಾಹುಲ್ ಕುಮಾರ್ ಮುಳುಗಿ ಸಾವನ್ನಪ್ಪಿದ್ದಾನೆ. ಸಿಮ್ಡೆಗಾದಲ್ಲಿ, ಬಾನೋ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಾಂಗ್ಸೋರ್ ಗ್ರಾಮದ ಎರಡೂವರೆ ವರ್ಷದ ಬಾಲಕಿ ಸೋಮವಾರ ತನ್ನ ಮನೆಯೊಳಗಿನ ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಆಕೆಯ ಅಜ್ಜಿ ಕೆಲವು ನಿಮಿಷಗಳ ಕಾಲ ಮತ್ತೊಂದು ಕೋಣೆಗೆ ಹೋದಾಗ ಈ ಘಟನೆ ಸಂಭವಿಸಿದೆ. ಹಿಂತಿರುಗಿದಾಗ, ಮಗು ಬಕೆಟ್‌ನಲ್ಲಿ ಮುಳುಗಿರುವುದನ್ನು ಕಂಡು ಶಾಕ್ ಆಗಿದ್ದರು.
ಸೆರೈಕೆಲಾ-ಖರ್ಸವಾನ್ ಜಿಲ್ಲೆಯಲ್ಲಿ ಮತ್ತೊಂದು ನೀರುಪಾಲದ ಪ್ರಕರಣ ನಡೆದಿದ್ದು, ಸೋಮವಾರ ಸಂಜೆ ಚಾಂಡಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಹೇರ್ಬೆರಾ ಬಳಿಯ ಸುಬರ್ಣರೇಖಾ ನದಿಯಲ್ಲಿ 14 ವರ್ಷದ ಬಾಲಕ ಆರ್ಯನ್ ಯಾದವ್ ಮುಳುಗಿ ಸಾವನ್ನಪ್ಪಿದ್ದಾನೆ. ಛತ್ ಪೂಜೆಯ ಸಮಯದಲ್ಲಿ 'ಅರ್ಘ್ಯ' ಅರ್ಪಿಸಿದ ನಂತರ ಈ ಘಟನೆ ನಡೆದಿದೆ.
Advertisement