

ಕಾಕಿನಾಡ: ಭೀಕರ ಚಂಡಮಾರುತ ಮೊಂತಾ ಮಂಗಳವಾರ ಸಂಜೆ ಆಂಧ್ರಪ್ರದೇಶದ ಕಾಕಿನಾಡು, ಕರಾವಳಿಗೆ ಅಪ್ಪಳಿಸಿದ್ದು, ಮುಂದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ದೃಢಪಡಿಸಿದೆ.
ರಾತ್ರಿ 8 ಗಂಟೆಗೆ ಬಿಡುಗಡೆಯಾದ IMD ಯ ಇತ್ತೀಚಿನ ಬುಲೆಟಿನ್ ಪ್ರಕಾರ, ಮೊಂತಾ ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ಅಕ್ಷಾಂಶ 16.05°N ಮತ್ತು ರೇಖಾಂಶ 82.25°E ಬಳಿ ಕೇಂದ್ರೀಕೃತವಾಗಿದ್ದು, ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 17 ಕಿ.ಮೀ ವೇಗದಲ್ಲಿ ಉತ್ತರ-ವಾಯುವ್ಯಕ್ಕೆ ಚಲಿಸುತ್ತಿದೆ.
ಈ ಚಂಡಮಾರುತವು ಮಚಲಿಪಟ್ನಂನಿಂದ ಪೂರ್ವಕ್ಕೆ 110 ಕಿ.ಮೀ, ಕಾಕಿನಾಡದಿಂದ ದಕ್ಷಿಣಕ್ಕೆ 100 ಕಿ.ಮೀ, ವಿಶಾಖಪಟ್ಟಣದಿಂದ ದಕ್ಷಿಣ-ನೈಋತ್ಯಕ್ಕೆ 220 ಕಿ.ಮೀ ಮತ್ತು ಒಡಿಶಾದ ಗೋಪಾಲಪುರದಿಂದ ನೈಋತ್ಯಕ್ಕೆ 460 ಕಿ.ಮೀ ದೂರದಲ್ಲಿದೆ.
ಈ ಚಂಡಮಾರುತವು ಅದೇ ದಿಕ್ಕಿನಲ್ಲಿ ಚಲಿಸುತ್ತಲೇ ಇರುತ್ತದೆ ಮತ್ತು ಆಂಧ್ರಪ್ರದೇಶದ ಮಚಲಿಪಟ್ಟಣ ಹಾಗೂ ಕಳಿಂಗಪಟ್ಟಣ ನಡುವೆ, ಕಾಕಿನಾಡದ ಸುತ್ತಲೂ ತೀವ್ರ ಚಂಡಮಾರುತವಾಗಿ ಹಾದುಹೋಗುತ್ತದೆ ಎಂದು ಐಎಂಡಿ ತಿಳಿಸಿದೆ. ಗಂಟೆಗೆ 90–110 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.
ಆಂಧ್ರಪ್ರದೇಶದ ಕರಾವಳಿ, ರಾಯಲಸೀಮಾ, ತೆಲಂಗಾಣ, ದಕ್ಷಿಣ ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ರಾತ್ರಿಯಿಡೀ ಬಿರುಗಾಳಿ ಸಹಿತ ಭಾರಿ ಮಳೆ ಮತ್ತು ಚಂಡಮಾರುತದ ಅಲೆಗಳು ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಕಚೇರಿ ಪುನರುಚ್ಚರಿಸಿದೆ. ಅಲ್ಲದೆ ಈ ಪ್ರದೇಶದ ನಿವಾಸಿಗಳು ಮನೆಯೊಳಗೆ ಇರಲು ಮತ್ತು ಅಧಿಕೃತ ಸುರಕ್ಷತಾ ಸಲಹೆಗಳನ್ನು ಅನುಸರಿಸಲು ಸೂಚಿಸಿದೆ.
ಆಂಧ್ರ ಕರಾವಳಿಯ ದುರ್ಬಲ ಪ್ರದೇಶಗಳಲ್ಲಿ ಅಧಿಕಾರಿಗಳು ಸ್ಥಳಾಂತರಿಸುವ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಪೂರ್ವ ಮತ್ತು ಪಶ್ಚಿಮ ಗೋದಾವರಿ, ಕಾಕಿನಾಡ ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಸಂಘಟಿಸುತ್ತಿವೆ.
32 ವಿಮಾನಗಳು ರದ್ದು
ಚಂಡಮಾರುತದ ಪರಿಣಾಮದಿಂದ ಇಂದು ವಿಶಾಖಪಟ್ಟಣಂ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ 32 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ವಿಜಯವಾಡ ವಿಮಾನ ನಿಲ್ದಾಣ ಕೂಡ ಇಂದು 16 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ನಿನ್ನೆ ವೈಜಾಗ್‌ಗೆ ಕೇವಲ ಒಂದು ವಿಮಾನವನ್ನು ರದ್ದುಗೊಳಿಸಲಾಗಿತ್ತು. ಇಂದು ದೇಶಾದ್ಯಂತ ದೆಹಲಿ, ಮುಂಬೈ ಸೇರಿದಂತೆ ವಿವಿಧ ಸ್ಥಳಗಳಿಗೆ 16 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ರೈಲುಗಳು ರದ್ದು
ವಿಜಯವಾಡ-ಭೀಮಾವರಂ, ನಿಡದವೋಲು-ಭೀಮಾವರಂ, ವಿಜಯವಾಡ-ಕಾಕಿನಾಡ ಬಂದರು, ಕಾಕಿನಾಡ ಬಂದರು-ರಾಜಮಂಡ್ರಿ, ಗುಂಟೂರು-ವಿಜಯವಾಡ, ವಿಜಯವಾಡ-ತೆನಾಲಿ, ರೆಪಲ್ಲೆ-ಮಾರ್ಕಾಪುರ ರಸ್ತೆ, ರಾಜಮಂಡ್ರಿ-ವಿಶಾಖಪಟ್ಟಣಂ, ಚೆನ್ನೈ ಸೆಂಟ್ರಲ್-ವಿಶಾಖಪಟ್ಟಣ, ಚೆನ್ನೈ ಸೆಂಟ್ರಲ್-ವಿಶಾಖಪಟ್ಟಣ-ವಿಶಾಖಪಟ್ಟಣ ಸೇರಿದಂತೆ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಸಿಕಂದರಾಬಾದ್-ವಿಶಾಖಪಟ್ಟಣ ಮಾರ್ಗಗಳಲ್ಲಿ ರೈಲು ಸಂಚಾರ ರದ್ದುಗೊಂಡಿದೆ.
Advertisement