

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಇಂಡಿಯಾ ಬ್ಲಾಕ್ ಅಥವಾ ಮಹಾಘಟಬಂಧನ್ (ಮಹಾಮೈತ್ರಿಕೂಟ) ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆ 'ಬಿಹಾರ ಕಾ ತೇಜಸ್ವಿ ಪ್ರಾಣ್' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಚಾರದ ಪ್ರಮುಖ ವಿಷಯವಾದ ಉದ್ಯೋಗವನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದ್ದು, ಹಳೆಯ ಪಿಂಚಣಿ ಯೋಜನೆಯನ್ನು ಸಹ ಉಲ್ಲೇಖಿಸಲಾಗಿದೆ.
ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಾವು ಬಿಹಾರದಲ್ಲಿ ಸರ್ಕಾರ ರಚಿಸುವುದು ಮಾತ್ರವಲ್ಲ, ಹೊಸ ಬಿಹಾರವನ್ನೂ ಸೃಷ್ಟಿಸಬೇಕು... ಮಹಾಘಟಬಂಧನ್ ಮೈತ್ರಿಕೂಟವು ಬಿಹಾರಕ್ಕಾಗಿ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದೆ..." ಎಂದು ಹೇಳಿದರು.
ಪ್ರಣಾಳಿಕೆಯ ಮೊದಲ ಅಂಶ ರಾಜ್ಯದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ತೇಜಸ್ವಿ ಯಾದವ್ ಪುನರುಚ್ಚರಿಸಿದರು. ಇಂಡಿಯಾ ಬಣ ಸರ್ಕಾರ ರಚಿಸಿದ 20 ತಿಂಗಳೊಳಗೆ ಈ ಯೋಜನೆಯನ್ನು ಬಿಹಾರದಾದ್ಯಂತ ಜಾರಿಗೆ ತರಲಾಗುವುದು ಎಂದು ತೇಜಸ್ವಿ ಹೇಳಿದರು.
ಜೀವಿಕಾ ದೀದಿಗೆ ಸರ್ಕಾರಿ ನೌಕರರಾಗಿ ಶಾಶ್ವತ ಸ್ಥಾನಮಾನ ನೀಡಲಾಗುವುದು ಮತ್ತು ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ಇಂಡಿಯಾ ಬಣ ಭರವಸೆ ನೀಡಿದೆ.
ಇಂಡಿಯಾ ಬಣ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲು ಘೋಷಿಸಿದ್ದು, ಈಗ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
"ಮಹಾಘಟಬಂಧನ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಎಲ್ಲರಗಿಂತ ಮೊದಲು ಘೋಷಿಸಿತು. ಅದು ತನ್ನ ಪ್ರಣಾಳಿಕೆಯನ್ನು ಸಹ ಎಲ್ಲರಗಿಂತ ಮೊದಲು ಬಿಡುಗಡೆ ಮಾಡಿದೆ... ಇದು ಬಿಹಾರದ ಬಗ್ಗೆ ಯಾರು ಗಂಭೀರರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ... ನಾವು ಮೊದಲ ದಿನದಿಂದಲೇ ಬಿಹಾರಕ್ಕಾಗಿ ಏನು ಮಾಡಬೇಕೆಂದು ನಿರ್ಧರಿಸಿದ್ದೇವೆ... ನಾವು ಬಿಹಾರವನ್ನು ಮತ್ತೆ ಹಳಿಗೆ ತರಬೇಕು... ಬಿಹಾರ ರಾಜ್ಯವು ಈ 'ಪ್ರಾಣ'ಕ್ಕಾಗಿ ಕಾಯುತ್ತಿದ್ದರಿಂದ ಇಂದು ಶುಭ ದಿನವಾಗಿದೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
Advertisement