

ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕಾಂಗ್ರೆಸ್ ಎಂಎಲ್ ಸಿ ಮೊಹಮ್ಮದ್ ಅಜರುದ್ದೀನ್ ಅವರು ಶುಕ್ರವಾರ ತೆಲಂಗಾಣ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈ ಬೆಳವಣಿಗೆಯ ಬಗ್ಗೆ ಕೇಳಿದಾಗ ತೆಲಂಗಾಣ ಪಿಸಿಸಿ ಅಧ್ಯಕ್ಷ ಬೊಮ್ಮ ಮಹೇಶ್ ಕುಮಾರ್ ಗೌಡ್ ಅವರು, "ಅಜರುದ್ದೀನ್ ಸಚಿವರಾಗಬಹುದು. ಆದರೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ.
ಈ ಬಗ್ಗೆ ಪಕ್ಷದಿಂದ ಅಥವಾ ಮಾಜಿ ಕ್ರಿಕೆಟಿಗ-ರಾಜಕಾರಣಿ ಅಜರುದ್ದೀನ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಪ್ರಸ್ತುತ ಸಚಿವ ಸಂಪುಟವು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸೇರಿದಂತೆ 15 ಸದಸ್ಯರನ್ನು ಒಳಗೊಂಡಿದೆ ಮತ್ತು ಅಲ್ಪಸಂಖ್ಯಾತರಿಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ. ಆದರೆ ಸಂಪುಟದಲ್ಲಿ ಇನ್ನೂ ಮೂರು ಸಚಿವ ಸ್ಥಾನ ಖಾಲಿ ಇವೆ.
ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ, ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಭಾರೀ ಚರ್ಚೆ ನಡೆಸುತ್ತಿದ್ದು, ಅಜರುದ್ದೀನ್ ಅವರು ಶುಕ್ರವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸಿದ್ದ ಅಜರುದ್ದೀನ್ ಸೋಲು ಅನುಭವಿಸಿದ್ದರು. ನಂತರ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಲಾಗಿತ್ತು.
Advertisement