

ಲಖನೌ: ಬಿಜೆಪಿಯ "ವಿನಾಶಕಾರಿ ರಾಜಕೀಯ" ತಡೆಯುವಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ಕಾಂಗ್ರೆಸ್ ವಿಫಲವಾಗಿದ್ದು, ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಬುಧವಾರ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಇಂದು ಭೈಚಾರ ಸಭೆಯಲ್ಲಿ ಮಾತನಾಡಿದ ಮಾಯಾವತಿ, ಮುಸ್ಲಿಮರು ಎಸ್‌ಪಿ ಪರವಾಗಿ ಅಗಾಧವಾಗಿ ಮತ ಚಲಾಯಿಸಿದರೂ, ಆ ಪಕ್ಷ ಬಿಜೆಪಿಯನ್ನು ಸೋಲಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ಅಲ್ಲದೆ ಮುಸ್ಲಿಮರಲ್ಲಿ ಬಿಎಸ್‌ಪಿಯ ಬೆಂಬಲದ ನೆಲೆಯನ್ನು ಬಲಪಡಿಸಲು ಅವರು ಪಕ್ಷದ ಕಾರ್ಯಕರ್ತರಿಗೆ ಪ್ರಮುಖ ನಿರ್ದೇಶನಗಳನ್ನು ನೀಡಿದರು.
"2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಹಿಂದಿನ ಹಲವಾರು ಚುನಾವಣೆಗಳಿಂದ, ಮುಸ್ಲಿಮರು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಂಪೂರ್ಣ ಬೆಂಬಲವನ್ನು ಎಸ್‌ಪಿ ಮತ್ತು ಕಾಂಗ್ರೆಸ್ ಗೆ ನೀಡಿದ್ದರೂ ಬಿಜೆಪಿಯನ್ನು ತಡೆಯಲು ವಿಫಲವಾಗಿವೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಸೀಮಿತ ಮುಸ್ಲಿಂ ಬೆಂಬಲದೊಂದಿಗೆ ಬಿಜೆಪಿಯನ್ನು ಸೋಲಿಸುವಲ್ಲಿ ಬಿಎಸ್‌ಪಿ ಯಶಸ್ವಿಯಾಗಿದೆ ಮತ್ತು 2007 ರಲ್ಲಿ ಅದು ರಾಜ್ಯದಲ್ಲಿ ಬಹುಮತದ ಸರ್ಕಾರವನ್ನು ರಚಿಸಿತ್ತು" ಎಂದು ಅವರು ಹೇಳಿದರು.
ಎಸ್ಪಿ ಮತ್ತು ಕಾಂಗ್ರೆಸ್ ಎರಡೂ ಐತಿಹಾಸಿಕವಾಗಿ "ದಲಿತ ವಿರೋಧಿ, ಹಿಂದುಳಿದ ವಿರೋಧಿ ಮತ್ತು ಮುಸ್ಲಿಂ ವಿರೋಧಿ" ರಾಜಕೀಯವನ್ನು ಅನುಸರಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಬಲವಾಗಲೂ ಅವರ "ತಪ್ಪು ನೀತಿಗಳು ಮತ್ತು ಚಟುವಟಿಕೆಗಳು" ಕಾರಣ ಎಂದು ಕಾಂಗ್ರೆಸ್, ಎಸ್ ಪಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement