

ಅಂಬಾಲಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು, ಇದು ಮರೆಯಲಾಗದ ಅನುಭವ ಎಂದು ಹೇಳಿದ್ದಾರೆ.
ಮುರ್ಮು ಅವರು ಇಂದು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಲ್ಲಿ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಇದರೊಂದಿಗೆ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ದೇಶದ ಮೊದಲ ರಾಷ್ಟ್ರಪತಿ ಎಂಬ ಗೌರವಕ್ಕೆ ಮುರ್ಮು ಪಾತ್ರರಾದರು.
ಇದಕ್ಕೂ ಮೊದಲು, ಅವರು 2023ರಲ್ಲಿ ಸುಖೋಯ್ 30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು.
ಬಳಿಕ ಮಾತನಾಡಿದ ಮುರ್ಮು ಅವರು, ಇದು ಮರೆಯಲಾಗದ ಅನುಭವ. ರಫೇಲ್ ಯುದ್ಧ ವಿಮಾನದಲ್ಲಿನ ಈ ಮೊದಲ ಹಾರಾಟವು ತಮ್ಮಲ್ಲಿ ದೇಶದ ರಕ್ಷಣಾ ಸಾಮರ್ಥ್ಯಗಳ ಬಗ್ಗೆ ಹೆಮ್ಮೆ ಮೂಡಿಸಿದೆ ಎಂದು ಹೇಳಿದರು.
ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು ಇಲ್ಲಿನ ವಾಯುಪಡೆ ನಿಲ್ದಾಣಕ್ಕೆ ಹಿಂತಿರುಗುವ ಮೊದಲು ಸುಮಾರು 200 ಕಿಲೋಮೀಟರ್ ದೂರದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದರು.
17 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಅಮಿತ್ ಗೆಹಾನಿ ಅವರು ವಿಮಾನ ಹಾರಾಟ ನಡೆಸಿದರು ಎಂದು ರಾಷ್ಟ್ರಪತಿ ಕಚೇರಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಯುದ್ಧ ವಿಮಾನವು ಸಮುದ್ರ ಮಟ್ಟದಿಂದ ಸುಮಾರು 15,000 ಅಡಿ ಎತ್ತರದಲ್ಲಿ ಮತ್ತು ಗಂಟೆಗೆ ಸುಮಾರು 700 ಕಿಲೋಮೀಟರ್ ವೇಗದಲ್ಲಿ ಹಾರಾಟ ನಡೆಸಿತು ಎಂದು ಪ್ರಕಟಣೆ ತಿಳಿಸಿದೆ.
Advertisement