

ಪಾಟ್ನಾ: ಮತಕ್ಕಾಗಿ ಪ್ರಧಾನಿ ಮೋದಿ ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ.
ಇತ್ತೀಚಿಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಗುರುವಾರ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ದೂರು ಸಲ್ಲಿಸಿದೆ.
ರಾಹುಲ್ ಗಾಂಧಿಯವರ ಹೇಳಿಕೆಗಳು ಪ್ರಧಾನಿ ಕಚೇರಿಯ ಘನತೆಗೆ ಅಪಹಾಸ್ಯ ಮತ್ತು ಅವಮಾನ, ಮಾದರಿ ನೀತಿ ಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951 ಅನ್ನು ಉಲ್ಲಂಘಿಸಿವೆ ಎಂದು ಬಿಜೆಪಿಯ ಚುನಾವಣಾ ಆಯೋಗದ ಸಮನ್ವಯ ವಿಭಾಗದ ಸಂಚಾಲಕ ಬಿಂಧ್ಯಾಚಲ ರೈ ಅವರು ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.
ಬುಧವಾರ ಮುಜಾಫರ್‌ಪುರ ಮತ್ತು ದರ್ಭಾಂಗದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನರೇಂದ್ರ ಮೋದಿ ಮತಕ್ಕಾಗಿ ಎಲ್ಲಾ ರೀತಿಯ ನಾಟಕ ಮಾಡಲು ಸಿದ್ಧರಿರುತ್ತಾರೆ. ನೀವು ಡ್ಯಾನ್ಸ್ ಮಾಡಿದ್ರೆ ನಾವು ವೋಟ್ ಹಾಕ್ತೀವಿ ಅಂತಾ ನೀವು ಹೇಳಿದ್ರೆ, ಅವರು ಭರತ ನಾಟ್ಯನೂ ಮಾಡ್ತಾರೆ ಎಂದು ಹೇಳಿದ್ದರು.
ಈ ಟೀಕೆಗಳನ್ನು ವೈಯಕ್ತಿಕ" ಮತ್ತು "ಅವಮಾನಕರ" ಎಂದು ಕರೆದಿರುವ ಬಿಜೆಪಿ, ರಾಹುಲ್ ಗಾಂಧಿಗೆ ಶೋಕಾಸ್ ನೋಟಿಸ್ ನೀಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಅಲ್ಲದೇ ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆ" ನೀಡುವಂತೆ ನಿರ್ದೇಶಿಸಬೇಕು. ಪ್ರಜಾಪ್ರಭುತ್ವ ಮತ್ತು ಚುನಾವಣಾ ಸೌಹಾರ್ದತೆಯ ಪಾವಿತ್ರ್ಯತೆಯನ್ನು ಕಾಪಾಡಲು" ನಿರ್ದಿಷ್ಟ ಅವಧಿಗೆ ಪ್ರಚಾರ ಮಾಡದಂತೆ ನಿರ್ಬಂಧಿಸಬೇಕು ಎಂದು ಆಗ್ರಹಿಸಿದೆ.
ರಾಜಕೀಯ ಲಾಭಕ್ಕಾಗಿ ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಇದನ್ನು ಭ್ರಷ್ಟ ಚುನಾವಣಾ ಅಭ್ಯಾಸ ಎಂದು ಹೇಳಿದೆ.
Advertisement