

ಕೊಚ್ಚಿ: ಕೊಚ್ಚಿಯಿಂದ ಅಬುಧಾಬಿಗೆ ಪ್ರಯಾಣಿಸುತ್ತಿದ್ದ ಕೇರಳದ ಇಬ್ಬರು ನರ್ಸ್‌ಗಳು, ತಮ್ಮ ಮೊದಲ ಅಂತರರಾಷ್ಟ್ರೀಯ ವಿಮಾನ ಪ್ರಯಾಣದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ಸಹ ಪ್ರಯಾಣಿಕನ ಜೀವ ಉಳಿಸಿದ್ದು, ಅವರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಯುಎಇಯಲ್ಲಿ ತಮ್ಮ ಹೊಸ ಕೆಲಸಕ್ಕೆ ಸೇರಲು ಏರ್ ಅರೇಬಿಯಾ ವಿಮಾನ 3L128 ನಲ್ಲಿ ಪ್ರಯಾಣಿಸುತ್ತಿದ್ದ ವಯನಾಡ್‌ನ 26 ವರ್ಷದ ಅಭಿಜಿತ್ ಜೀಸ್ ಮತ್ತು ಚೆಂಗನ್ನೂರಿನ 29 ವರ್ಷದ ಅಜೀಶ್ ನೆಲ್ಸನ್ ಅವರು ಕೇರಳದ ಸಹ ಪ್ರಯಾಣಿಕರೊಬ್ಬರು ಉಸಿರಾಟದ ತೊಂದರೆ ಅನುಭಿಸುತ್ತಿರುವುದನ್ನು ಗಮನಿಸಿದರು ಎಂದು ಗಲ್ಫ್ ನ್ಯೂಸ್ ಬುಧವಾರ ವರದಿ ಮಾಡಿದೆ.
ತಕ್ಷಣ ಇಬ್ಬರೂ ಆ ವ್ಯಕ್ತಿಯ ಸಹಾಯಕ್ಕೆ ಧಾವಿಸಿ ಎರಡು ಸುತ್ತು ಸಿಪಿಆರ್ ಮಾಡಿದರು. ಪ್ರಯಾಣಿಕ ನಾಡಿಮಿಡಿತವನ್ನು ಮರಳಿ ಪಡೆಯುವವರೆಗೆ ಮತ್ತು ಮತ್ತೆ ಉಸಿರಾಡಲು ಆರಂಭಿಸುವವರೆಗೆ ಸತತ ಸಿಪಿಆರ್ ಮಾಡಿದರು ಎಂದು ವರದಿ ತಿಳಿಸಿದೆ.
"ನಾನು ಅವರ ನಾಡಿಮಿಡಿತವನ್ನು ಪರಿಶೀಲಿಸಿದೆ. ಆದರೆ ಅದು ಇರಲಿಲ್ಲ. ಅವರು ಹೃದಯ ಸ್ತಂಭನದಲ್ಲಿದ್ದಾರೆಂದು ನನಗೆ ತಿಳಿಯಿತು" ಎಂದು ಅಭಿಜಿತ್ ಹೇಳಿದ್ದಾರೆ.
"ನಾನು ತಕ್ಷಣ ಸಿಪಿಆರ್ ಅನ್ನು ಪ್ರಾರಂಭಿಸಿದೆ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ. ವಿಮಾನದಲ್ಲಿದ್ದ ವೈದ್ಯ ಡಾ. ಆರಿಫ್ ಅಬ್ದುಲ್ ಖಾದಿರ್ ಸಹ ರೋಗಿಯನ್ನು ಸ್ಥಿರಗೊಳಿಸುವಲ್ಲಿ ಇಬ್ಬರಿಗೂ ಸಹಾಯ ಮಾಡಿದರು" ಎಂದು ಅಭಿಜಿತ್ ಹೇಳಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಇಬ್ಬರು ವಿಮಾನದಿಂದ ಇಳಿದ ನಂತರ ಘಟನೆಯ ಬಗ್ಗೆ ಯಾರಿಗೂ ಹೇಳದೆ ಸದ್ದಿಲ್ಲದೆ ತಮ್ಮ ಹೊಸ ಕೆಲಸದ ಸ್ಥಳಕ್ಕೆ ತೆರಳಿದರು. ಆದಾಗ್ಯೂ, ನಂತರ ಸಹ ಪ್ರಯಾಣಿಕರ ಮೂಲಕ ಈ ಕಥೆ ಹೊರಬಿದ್ದಿತು ಎಂದು ವರದಿ ತಿಳಿಸಿದೆ.
ವಿಮಾನ ನಿಲ್ದಾಣದ ವೈದ್ಯಕೀಯ ತಂಡದಿಂದ ಸೂಕ್ತ ಚಿಕಿತ್ಸೆ ಪಡೆದ ನಂತರ ಇಬ್ಬರೂ ರಕ್ಷಿಸಿದ ಪ್ರಯಾಣಿಕನ ಆರೋಗ್ಯ ಸ್ಥಿರವಾಗಿದ್ದಾರೆ. ಆ ವ್ಯಕ್ತಿಯ ಕುಟುಂಬವು ಇಬ್ಬರು ನರ್ಸ್ ಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ ಎಂದು ವರದಿ ತಿಳಿಸಿದೆ.
Advertisement