

ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತಕ್ಕೆ ಸೇರಿಸಲು ಬಯಸಿದ್ದರು, ಆದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅದನ್ನು ಮಾಡದಂತೆ ತಡೆದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನ ಎಕ್ತಾ ನಗರದ ಏಕತಾ ಪ್ರತಿಮೆಯ ಬಳಿ ನಡೆದ ರಾಷ್ಟ್ರೀಯ ಏಕತಾ ದಿನ ಆಚರಣೆಯಲ್ಲಿ ಮಾತನಾಡಿದ ಮೋದಿ, ಸರ್ದಾರ್ ಪಟೇಲ್ ಅವರು ಇತರ ರಾಜಪ್ರಭುತ್ವದ ರಾಜ್ಯಗಳೊಂದಿಗೆ ಮಾಡಿದಂತೆ ಇಡೀ ಕಾಶ್ಮೀರವನ್ನು ಒಗ್ಗೂಡಿಸಲು ಬಯಸಿದ್ದರು. ಆದರೆ ಅವರ ಆಸೆಗೆ ನೆಹರೂ ಅಡ್ಡಬಂದರು. ಕಾಶ್ಮೀರವನ್ನು ವಿಭಜಿಸಲಾಯಿತು. ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಧ್ವಜವನ್ನು ನೀಡಲಾಯಿತು, ಕಾಂಗ್ರೆಸ್‌ನ ತಪ್ಪಿನಿಂದಾಗಿ ರಾಷ್ಟ್ರವು ದಶಕಗಳ ಕಾಲ ಬಳಲಿ ಹೋಯಿತು ಎಂದರು.
ಸ್ವಾತಂತ್ರ್ಯ ನಂತರ 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಗ್ಗೂಡಿಸುವಲ್ಲಿ ಪಟೇಲ್ ಅವರ ನಾಯಕತ್ವವನ್ನು ಮೋದಿ ಶ್ಲಾಘಿಸಿದರು, ಸಾಧ್ಯವಾಗದ ಕೆಲಸ ಪಟೇಲ್ ಅವರಿಂದ ಸಾಧ್ಯವಾಯಿತು ಎಂದರು.
ಸರ್ದಾರ್ ಪಟೇಲ್ ಅವರಿಗೆ, 'ಒಂದು ಭಾರತ, ಅತ್ಯುತ್ತಮ ಭಾರತ' ಎಂಬ ಕಲ್ಪನೆಯು ಅತ್ಯಂತ ಮುಖ್ಯವಾಗಿತ್ತು. ಇತಿಹಾಸ ಬರೆಯುವ ಸಮಯವನ್ನು ವ್ಯರ್ಥ ಮಾಡಬಾರದು ಆದರೆ ಅದನ್ನು ರಚಿಸಲು ಶ್ರಮಿಸಬೇಕು ಎಂದು ಅವರು ನಂಬಿದ್ದರು ಎಂದರು.
ಭಾಷಣಕ್ಕೂ ಮುನ್ನ, ಮೋದಿ ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ಪ್ರತಿಮೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ರಾಷ್ಟ್ರೀಯ ಏಕತಾ ದಿನ
2014 ರಿಂದ ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) ಎಂದು ಆಚರಿಸಲಾಗುವ ಈ ದಿನವು, "ಭಾರತದ ಉಕ್ಕಿನ ಮನುಷ್ಯ" ಎಂದು ಕರೆಯಲ್ಪಡುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪರಂಪರೆಯನ್ನು ಆಚರಿಸುತ್ತದೆ.
ಏಕತಾ ದಿವಸ್ ಪ್ರತಿಜ್ಞೆಯನ್ನು ಬೋಧಿಸಲು ಮತ್ತು ರಾಷ್ಟ್ರೀಯ ಏಕತಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ಹತ್ತಿರದ ಸ್ಥಳಕ್ಕೆ ತೆರಳುವ ಮೊದಲು ಮೋದಿ ಏಕತಾ ನಗರದಲ್ಲಿರುವ 182 ಮೀಟರ್ ಎತ್ತರದ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಬಲಿಷ್ಠ, ಸಾಮರಸ್ಯ, ಅತ್ಯುತ್ತಮ ಭಾರತವನ್ನು ನಿರ್ಮಿಸೋಣ: ರಾಷ್ಟ್ರಪತಿ ಮುರ್ಮು
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ನಾಗರಿಕರಿಗೆ ಶುಭಾಶಯ ಕೋರಿದರು. ಬಲವಾದ, ಸಾಮರಸ್ಯ ಮತ್ತು ಅತ್ಯುತ್ತಮ ಭಾರತವನ್ನು ನಿರ್ಮಿಸಲು ಎಲ್ಲರೂ ಸಂಕಲ್ಪ ಮಾಡುವಂತೆ ಕೇಳಿಕೊಂಡರು.
ಸರ್ದಾರ್ ಪಟೇಲ್ ಒಬ್ಬ ಮಹಾನ್ ದೇಶಭಕ್ತ, ದಾರ್ಶನಿಕ ನಾಯಕ ಮತ್ತು ರಾಷ್ಟ್ರನಿರ್ಮಾಪಕರಾಗಿದ್ದರು, ಅವರು ತಮ್ಮ ಅಚಲವಾದ ಸಂಕಲ್ಪ, ಅದಮ್ಯ ಧೈರ್ಯ ಮತ್ತು ಪ್ರವೀಣ ನಾಯಕತ್ವದ ಮೂಲಕ ದೇಶವನ್ನು ಏಕೀಕರಿಸುವ ಐತಿಹಾಸಿಕ ಕಾರ್ಯವನ್ನು ಸಾಧಿಸಿದರು ಎಂದು ಮುರ್ಮು ಹೇಳಿದರು.
ಅವರ ಸಮರ್ಪಣೆ ಮತ್ತು ರಾಷ್ಟ್ರೀಯ ಸೇವೆಯ ಮನೋಭಾವವು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. 'ರಾಷ್ಟ್ರೀಯ ಏಕತಾ ದಿನ'ದ ಸಂದರ್ಭದಲ್ಲಿ, ನಾವೆಲ್ಲರೂ ಒಟ್ಟಾಗಿ ಒಂದಾಗೋಣ. ಬಲಿಷ್ಠ, ಸಾಮರಸ್ಯ ಮತ್ತು ಅತ್ಯುತ್ತಮ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡೋಣ ಎಂದು ರಾಷ್ಟ್ರಪತಿಗಳು ಎಕ್ಸ್ ಪೋಸ್ಟ್ ನಲ್ಲಿ ಹೇಳಿದರು.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು, ನನ್ನ ಎಲ್ಲಾ ಸಹ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ರಾಷ್ಟ್ರಪತಿಗಳು ಹೇಳಿ ದೆಹಲಿಯ ಸರ್ದಾರ್ ಪಟೇಲ್ ಚೌಕ್‌ನಲ್ಲಿ 'ಉಕ್ಕಿನ ಮನುಷ್ಯ' ನಿಗೆ ಗೌರವ ಸಲ್ಲಿಸಿದರು.
ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ಸರ್ದಾರ್ ಪಟೇಲ್ ಅವರಿಗೆ ಅವರು ಪುಷ್ಪ ನಮನ ಸಲ್ಲಿಸಿದರು.
Advertisement