
ನವದೆಹಲಿ: ಭಾರತೀಯ ರೈಲ್ವೇ ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಮಹತ್ವದ ವಿಮಾ ರಕ್ಷಣೆ ಒದಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸೋಮವಾರ ಸಹಿ ಹಾಕಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ನಡೆದ ಒಪ್ಪಂದದಡಿ, ಎಸ್‌ಬಿಐನಲ್ಲಿ ಸ್ಯಾಲರಿ ಖಾತೆ ಹೊಂದಿರುವ ನೌಕರರು ರೂ. 1 ಕೋಟಿ ಮೊತ್ತದ ಆಕಸ್ಮಿಕ ಮರಣ ವಿಮೆಯನ್ನು ಪಡೆಯುತ್ತಾರೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದ.
ಕೇಂದ್ರ ಸರ್ಕಾರಿ ನೌಕರರ ಗುಂಪು ವಿಮಾ ಯೋಜನೆ (CGEGIS) ಅಡಿಯಲ್ಲಿ ಪ್ರಸ್ತುತ ಗ್ರೂಪ್ A, B ಮತ್ತು C ನೌಕರರಿಗೆ ಇರುವ ಕ್ರಮವಾಗಿ ರೂ. 1.20 ಲಕ್ಷ, ರೂ. 60,000 ಮತ್ತು ರೂ.30,000 ಮೊತ್ತದ ವಿಮೆ ಗಮನಾರ್ಹವಾಗಿ ರೂ. 1 ಕೋಟಿಗೆ ಹೆಚ್ಚಳವಾಗಲಿದೆ.
ಅಲ್ಲದೇ ಎಸ್‌ಬಿಐನಲ್ಲಿ ವೇತನ ಖಾತೆಯನ್ನು ಹೊಂದಿರುವ ಎಲ್ಲಾ ರೈಲ್ವೆ ಉದ್ಯೋಗಿಗಳು ಈಗ ಯಾವುದೇ ಪ್ರೀಮಿಯಂ ಪಾವತಿಸುವ ಅಥವಾ ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲದೇ ರೂ. 10 ಲಕ್ಷ ಮೊತ್ತದ ಸಹಜ ಸಾವಿನ ವಿಮೆಗೂ ಅರ್ಹರಾಗುತ್ತಾರೆ.
ಸುಮಾರು 7 ಲಕ್ಷ ರೈಲ್ವೆ ಉದ್ಯೋಗಿಗಳು ಎಸ್‌ಬಿಐನಲ್ಲಿ ಸ್ಯಾಲರಿ ಖಾತೆ ಹೊಂದಿದ್ದು, ಈ ಒಪ್ಪಂದ ನೌಕರರ ಕಲ್ಯಾಣದತ್ತ ಪ್ರಮುಖ ಹೆಜ್ಜೆಯಾಗಿದೆ. ಇದು ಭಾರತೀಯ ರೈಲ್ವೇ ಮತ್ತು ಎಸ್‌ಬಿಐ ನಡುವಿನ ಕಾಳಜಿ ಮತ್ತು ರಚನಾತ್ಮಕ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು SBI ಹೇಳಿದೆ.
ರೈಲ್ವೆ ಸಚಿವಾಲಯದ ಪ್ರಕಾರ ಈ ಒಪ್ಪಂದ ಹಲವು ಪೂರಕ ವಿಮಾ ರಕ್ಷಣೆಗಳನ್ನು ಸಹ ಒದಗಿಸುತ್ತದೆ. ಇವುಗಳಲ್ಲಿ ರೂ. 1.60 ಕೋಟಿ ಮೊತ್ತದ ವಿಮಾನ ಅಪಘಾತ ಮರಣ ವಿಮೆ ಜೊತೆಗೆ ರುಪೇ ಡೆಬಿಟ್ ಕಾರ್ಡ್ ಗಳಿಗೆ ಹೆಚ್ಚುವರಿ ರೂ. 1 ಕೋಟಿಗಳ ವೈಯಕ್ತಿಕ ಅಪಘಾತ, ಶಾಶ್ವತ ಅಂಗವೈಕಲ್ಯ ವಿಮೆ ಹಾಗೂ ರೂ. 80ಲಕ್ಷ ಮೊತ್ತದ ವೈಯಕ್ತಿಕ ಅಪಘಾತ, ಶಾಶ್ವತ ಅಥವಾ ಭಾಗಶ: ಅಂಗವೈಕಲ್ಯ ರಕ್ಷಣೆಯೂ ಸೇರಿವೆ.
ಈ ಒಪ್ಪಂದವು ಎಲ್ಲಾ ವರ್ಗದ ಉದ್ಯೋಗಿಗಳಿಗೆ ವಿಶೇಷವಾಗಿ ಗ್ರೂಪ್ ಸಿ ಮುಂಚೂಣಿ ಸಿಬ್ಬಂದಿಗೆ ಪ್ರಯೋಜನವಾಗುವಂತೆ ರೂಪಿಸಲಾಗಿದೆ. ಆರ್ಥಿಕ ಭದ್ರತೆ ಹೆಚ್ಚಿಸುವ ಮೂಲಕ ಭಾರತೀಯ ರೈಲ್ವೆಯ ಬೆನ್ನೆಲುಬು ಆಗಿರುವ ಕಾರ್ಯಪಡೆ ಬೆಂಬಲಿಸುವುದು ಈ ಒಪ್ಪಂದದ ಗುರಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
Advertisement