
ನವದೆಹಲಿ: ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರ ಪತ್ನಿ ಕೆ. ನೀಲಿಮಾ ಅವರಿಗೆ ಚುನಾವಣಾ ಆಯೋಗ ಗುರುವಾರ ನೋಟಿಸ್ ನೀಡಿದೆ.
ದೆಹಲಿಯ ಜಂಗ್‌ಪುರ ಮತ್ತು ನವದೆಹಲಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಪವನ್ ಖೇರಾ ಎರಡು ವೋಟರ್ ಐಡಿ ಹೊಂದಿದ್ದಾರೆ ಎಂದು ಭಾರತೀಯ ಜನತಾ ಪಕ್ಷ(BJP) ಆರೋಪಿಸಿದ ನಂತರ ಚುನಾವಣಾ ಆಯೋಗವು ಅವರಿಗೆ ನೋಟಿಸ್ ನೀಡಿತ್ತು. ಇದಾದ ಎರಡು ದಿನಗಳ ಬಳಿಕ ಇದೀಗ ಅವರ ಪತ್ನಿ ಕೆ. ನೀಲಿಮಾ ಅವರಿಗೂ ನೋಟಿಸ್ ನೀಡಿದೆ.
ನವದೆಹಲಿ ಮಾತ್ರವಲ್ಲದೆ ತೆಲಂಗಾಣದ ಖೈರ್ತಾಬಾದ್‌ನಲ್ಲಿಯೂ ಪವನ್ ಖೇರಾ ಅವರ ಪತ್ನಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದ್ದು, ಇದಕ್ಕೆ ಉತ್ತರಿಸಲು ಸೆಪ್ಟೆಂಬರ್ 10ರವರೆಗೆ ಅವರಿಗೆ ಕಾಲಾವಕಾಶ ನೀಡಲಾಗಿದೆ.
"ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೋಂದಾಯಿಸುವುದು ಜನತಾ ಪ್ರಾತಿನಿಧ್ಯ ಕಾಯ್ದೆ1950 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ, ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ಸೂಚಿಸಲಾಗಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 17 ಮತ್ತು ಸೆಕ್ಷನ್ 18ರ ಅಡಿಯಲ್ಲಿ ಪವನ್ ಖೇರಾ ಹಾಗೂ ಅವರ ಪತ್ನಿಗೆ ನೋಟಿಸ್ ನೀಡಲಾಗಿದೆ. ಈ ಕಾಯ್ದೆ ಪ್ರಕಾರ ಒಬ್ಬ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ಹೊಂದಿರಬೇಕು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿಸುವುದನ್ನು ನಿಷೇಧಿಸುತ್ತದೆ.
Advertisement