
ಲಖನೌ: ಉತ್ತರ ಪ್ರದೇಶದ ಲಖನೌದ Amity ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ಬಿಎ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ವಿಶ್ವವಿದ್ಯಾಲಯದ ಪಾರ್ಕಿಂಗ್ ಸ್ಥಳದಲ್ಲಿ ಆತನ ಸಹಪಾಠಿಗಳೇ ಕಾರೊಂದರಲ್ಲಿ 50ರಿಂದ 60 ಬಾರಿ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ.
ಆಗಸ್ಚ್ 26 ರಂದು ಈ ಘಟನೆ ನಡೆದಿದ್ದು,ಅಂದಿನಿಂದಲೂ 101 ಸೆಕೆಂಡ್ ಗಳ ಹಲ್ಲೆ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಿಖರ್ ಮುಖೇಶ್ ಕೇಸರ್ವಾನಿ ಎಂದು ಗುರುತಿಸಲಾಗಿದೆ.
ತನ್ನ ಸ್ನೇಹಿತೆ ಸೌಮ್ಯ ಸಿಂಗ್ ಯಾದವ್ ಜೊತೆಗೆ ಕಾರೊಂದರಲ್ಲಿ ತರಗತಿಗೆ ಹಾಜರಾಗಲು ಕ್ಯಾಂಪಸ್ ಗೆ ಬಂದಾಗ ಹಲ್ಲೆ ಘಟನೆ ನಡೆದಿದೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ವಿಶ್ವವಿದ್ಯಾಲಯವೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶಿಖರ್ ತಂದೆ ನೀಡಿದ ದೂರಿನ ಆಧಾರದ ಮೇಲೆ ಆಯುಷ್ ಯಾದವ್, ಜಾಹ್ನವಿ ಮಿಶ್ರಾ, ಮಿಲೇ ಬ್ಯಾನರ್ಜಿ, ವಿವೇಕ್ ಸಿಂಗ್ ಮತ್ತು ಆರ್ಯಮಾನ್ ಶುಕ್ಲಾ ಎಂಬ ಐವರು ವಿದ್ಯಾರ್ಥಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಆಗಸ್ಟ್ 11 ರಂದು ನನ್ನ ಮಗನಿಗೆ ಅಸ್ಥಿರಜ್ಜು ಶಸ್ತ್ರಚಿಕಿತ್ಸೆ ಮಾಡಲಾಯಿತು. ಅವನು ಕೋಲಿನ ಸಹಾಯದಿಂದ ನಡೆಯುತ್ತಿದ್ದನು. ನಂತರ ಜಾಹ್ನವಿ ಮಿಶ್ರಾ ಮತ್ತು ಆಯುಷ್ ಯಾದವ್ ನನ್ನ ಮಗನಿಗೆ ಕನಿಷ್ಠ 50 ರಿಂದ 60 ಬಾರಿ ಕಪಾಳಮೋಕ್ಷ ಮಾಡಿದ್ದು, ಆತನಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಮುಂಭಾಗದ ಪ್ರಯಾಣಿಕ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯೊಬ್ಬಳು ಶಿಖರ್ ಅವರ ಎಡ ಕೆನ್ನೆಗೆ ನಿರಂತರವಾಗಿ ಹೊಡೆಯುವುದನ್ನು ಕಾಣಬಹುದು. ತದ ನಂತರ ಆಯುಷ್ ಕೂಡಾ ಶಿಖರ್ ಕೆನ್ನೆಗೆ ಹೊಡೆಯುವುದು ಕಂಡುಬಂದಿದೆ.
ಕಾರಿನಲ್ಲಿದ್ದ ಮತ್ತೊರ್ವ ವ್ಯಕ್ತ ಶಿಖರ್ ಕ್ಷಮೆಯಾಚಿಸಿದ್ದು, ಹಲ್ಲೆ ಮಾಡುವುದನ್ನು ನಿಲ್ಲಿಸುವಂತೆ ಆಯುಷ್ ಗೆ ಹೇಳುವುದು ಕೇಳಿಸುತ್ತದೆ.
Advertisement