
ನೋಯ್ಡಾ: ಲಷ್ಕರ್-ಎ-ಜಿಹಾದಿ ಎಂದು ಕರೆದುಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು 400 ಕೆಜಿ ಆರ್ ಡಿಎಕ್ಸ್ ನೊಂದಿಗೆ ನಗರಕ್ಕೆ ಪ್ರವೇಶಿಸಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ರವಾನಿಸಿದ ಆರೋಪದ ಮೇಲೆ ನೋಯ್ಡಾದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಆರೋಪಿಯನ್ನು ಅಶ್ವನಿ ಕುಮಾರ್ ಎಂದು ಗುರುತಿಸಲಾಗಿದೆ. ಈತ ಬಿಹಾರ ಮೂಲದವನಾಗಿದ್ದು, ನೋಯ್ಡಾದ ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಸೆಕ್ಟರ್ 79 ರಿಂದ ಆತನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಂಬೈ ಪೊಲೀಸರಿಗೆ ಗುರುವಾರ ಬೆದರಿಕೆ ಸಂದೇಶ ಬಂದಿತ್ತು. 34 ವಾಹನಗಳಲ್ಲಿ 400 ಕೆಜಿ ಆರ್ಡಿಎಕ್ಸ್ ಹೊತ್ತ ಮಾನವ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಸಂಚಾರ ಪೊಲೀಸ್ ಠಾಣೆಗೆ ಬೆದರಿಕೆ ವಾಟ್ಸಾಪ್ ಸಂದೇಶ ಬಂದಿದ್ದು ನಗರದ್ಯಾಂತ ಭಾರೀ ಕಟ್ಟೆಚ್ಚರ ವಹಿಸಿದ್ದರು.
ಈ ಕುರಿತು ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಅದು ನೋಯ್ಡಾದಿಂದ ಬಂದ ಸಂದೇಶ ಎಂಬುದು ತಿಳಿದುಬಂದಿದೆ. ನಂತರ ಸೆಕ್ಟರ್ 113 ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ವಂಚನೆ ಬೆದರಿಕೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಂಬೈಗೆ ಕರೆತರಲಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
Advertisement