
ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ 'ನಗ್ನ ಗ್ಯಾಂಗ್' ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ. ಬೆತ್ತಲೆಯಾಗಿ ಬರುವ ಈ ಗ್ಯಾಂಗ್ ಕಿರಾತಕರು, ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ಯುತ್ತಿದ್ದಾರೆ. ಇತ್ತೀಚೆಗೆ ಇಂತಹ ನಾಲ್ಕನೇ ಪ್ರಕರಣ ವರದಿಯಾಗಿದ್ದು, ದೌರಾಲಾ ಗ್ರಾಮದ ಮಹಿಳೆಯರು ಭಯಭೀತಿಗೊಂಡಿದ್ದಾರೆ.
ವಿಷಯದ ಗಂಭೀರತೆ ಅರಿತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ ಗ್ಯಾಂಗ್ ಪತ್ತೆಹಚ್ಚಲು ಡ್ರೋನ್, ಸಿಸಿಟಿವಿಗಳನ್ನು ಕಣ್ಗಾವಲಿಗೆ ಇರಿಸಿದ್ದಾರೆ.
ಇತ್ತೀಚಿಗೆ ಭಾರಾಲಾ ಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಕೆಲಸದ ಸ್ಥಳಕ್ಕೆ ಒಂಟಿಯಾಗಿ ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆಕೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಮಹಿಳೆ ಕಿರುಚುತ್ತಾ ಅವರಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಎಲ್ಲಾ ಕಡೆಯಿಂದ ಹೊಲವನ್ನು ಸುತ್ತುವರೆದಿದ್ದಾರೆ. ಆದರೆ ಯಾರೂ ಪತ್ತೆಯಾಗಲಿಲ್ಲ. ಅವರು ಹೇಗಿದ್ದಾರೆ ಎಂದು ಕೇಳಿದಾಗ, ಆರೋಪಿಗಳು ಯಾವುದೇ ಬಟ್ಟೆ ಧರಿಸಿರಲಿಲ್ಲ ಎಂದು ಮಹಿಳೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ. ಘಟನೆಯಿಂದ ಭಯಗೊಂಡ ಆಕೆ ಈಗ ತನ್ನ ಕೆಲಸವನ್ನು ಬದಲಾಯಿಸಿಕೊಂಡಿದ್ದಾಳೆ ಮತ್ತು ಕೆಲಸಕ್ಕೆ ಬೇರೆ ದಾರಿ ಹಿಡಿದಿದ್ದಾಳೆ ಎಂದು ಆಕೆಯ ಪತಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಇದು ನಾಲ್ಕನೇ ಪ್ರಕರಣವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಜನರ ಭಯದ ಕಾರಣ ಈ ಹಿಂದಿನ ಘಟನೆಗಳನ್ನು ಯಾರೂ ಹೇಳಿಕೊಂಡಿಲ್ಲ. ಆದರೆ ಈಗ ಪರಿಸ್ಥಿತಿ ಕೈಮೀರಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಗ್ಯಾಂಗ್ ಇಲ್ಲಿವರೆಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹೊತ್ತೊಯ್ಯುತ್ತಿದ್ದಾರೆ. ಪೊಲೀಸರು ಕೂಡಲೇ ಗ್ಯಾಂಗ್‌ಅನ್ನು ಪತ್ತೆಹಚ್ಚಬೇಕೆಂದು ಗ್ರಾಮದ ಮುಖಂಡ ರಾಜೇಂದ್ರ ಕುಮಾರ್ ಒತ್ತಾಯಿಸಿದ್ದಾರೆ.
ಪೊಲೀಸರು ಆರೋಪಿಗಳಿಗಾಗಿ ಹೊಲಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಕಳೆದ ಶನಿವಾರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡ್ರೋನ್ ಗಳೊಂದಿಗೆ ತಾಸುಗಟ್ಟಲೇ ಶೋಧ ಕಾರ್ಯ ನಡೆದಿದೆ. ಜೊತೆಗೆ ಹತ್ತಿರದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಗ್ರಾಮಸ್ಥರ ನೆರವಿನೊಂದಿಗೆ ಡ್ರೋನ್ ಗಳೊಂದಿಗೆ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಯಾವುದೇ ಶಂಕಿತ ವ್ಯಕ್ತಿ ಪತ್ತೆಯಾಗಿಲ್ಲ. ಈ ಪ್ರದೇಶದಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಪಿನ್ ತಾಡಾ ತಿಳಿಸಿದ್ದಾರೆ.
Advertisement